ಬೆಂಗಳೂರು :ಆನೆಗಳನ್ನು ಪೂಜೆಗೆ ಬಳಸಿಕೊಳ್ಳುವುದು ಕೂಡ ಕ್ರೌರ್ಯ. ಅವುಗಳು ತಮ್ಮ ಪರಿವಾರದೊಂದಿಗೆ ಕಾಡಿನಲ್ಲಿರಬೇಕು. ದೇವಸ್ಥಾನದಲ್ಲಿ ಅಲ್ಲ ಎಂದು ಹೈಕೋರ್ಟ್ ಮೌಖಿಕವಾಗಿ ಅಭಿಪ್ರಾಯಪಟ್ಟಿದೆ.
ದೇವಸ್ಥಾನದ ಆನೆಯನ್ನು ಅಲ್ಲಿಯೇ ಇರಿಸಬೇಕು ಎಂದು ಕೋರಿ ನಗರದ ತಿಂಡ್ಲು ಬಳಿಯ ವಿದ್ಯಾರಣ್ಯಪುರದ ಶ್ರೀ ಕಾಳಿಕಾದುರ್ಗಾ ಪರಮೇಶ್ವರಿ ದೇವಸ್ಥಾನದ ಸಂಸ್ಥಾಪಕ ಟ್ರಸ್ಟಿ ರಾಧಮ್ಮ ಮತ್ತು ಪ್ರಧಾನ ಅರ್ಚಕ ವಸಂತ್ ಕುಮಾರ್ ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರ ಪರ ವಕೀಲರು ವಾದಿಸಿ, ಕಾಳಿಕಾದುರ್ಗ ಪರಮೇಶ್ವರಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲು ಆನೆ ತಂದು ಪೋಷಿಸಲಾಗುತ್ತಿತ್ತು. ಇದೀಗ ದೇವಸ್ಥಾನವನ್ನು ಮುಜರಾಯಿ ಇಲಾಖೆ ಸುಪರ್ದಿಗೆ ಪಡೆದು, ಆನೆಯನ್ನೂ ವಶಕ್ಕೆ ಪಡೆದಿದೆ. ಹೀಗಾಗಿ ಆನೆಯನ್ನು ಸ್ಥಳಾಂತರಿಸದೆ ದೇವಸ್ಥಾನದಲ್ಲಿಯೇ ಇರಿಸಲು ಮುಜರಾಯಿ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿದರು.
ಅರ್ಜಿದಾರರ ವಿರುದ್ಧ ತೀವ್ರ ಆಕ್ರೋಶಗೊಂಡ ಪೀಠ, ಆನೆಗಳು ಕಾಡಿನಲ್ಲಿರಬೇಕು ಹೊರತು ದೇವಸ್ಥಾನದಲ್ಲಿ ಅಲ್ಲ. ಕಾಡಿನಲ್ಲಿರಬೇಕಾದ ಪ್ರಾಣಿಯನ್ನು ದೇವಸ್ಥಾನದಲ್ಲಿ ಇರಿಸುವುದು ತಪ್ಪು. ಪೂಜಾ ಕಾರ್ಯಕ್ರಮಗಳಿಗೆ ಆನೆಯನ್ನು ಬಳಕೆ ಮಾಡುತ್ತಿರುವುದು ಕ್ರೌರ್ಯ ಎನ್ನಿಸಿಕೊಳ್ಳುತ್ತದೆ. ಕಾಡಿನಲ್ಲಿ ಇತರೆ ಆನೆಗಳೊಂದಿಗೆ ಜೀವಿಸಲು ಅವಕಾಶ ನೀಡದೆ, ಆನೆಯನ್ನು ದೇವಸ್ಥಾನದಲ್ಲಿರಿಸಿ ಪೂಜಾ ಕಾರ್ಯಕ್ರಮಕ್ಕೆ ಬಳಸುವುದು ಸರಿಯಲ್ಲ ಎಂದಿತು.