ಬೆಂಗಳೂರು :ರಾಜ್ಯದಲ್ಲಿ ವಕ್ಫ್ ಮಂಡಳಿ ಆಸ್ತಿ ಒತ್ತುವರಿ ತೆರವುಗೊಳಿಸುವ ಸಂಬಂಧ ಕೈಗೊಂಡಿರುವ ಕ್ರಮಗಳ ಕುರಿತ ವರದಿಯನ್ನು ಪ್ರಮಾಣ ಪತ್ರದ ಮೂಲಕ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ವಕ್ಫ್ ಆಸ್ತಿಗಳ ಒತ್ತುವರಿ ಹಾಗೂ ದುರ್ಬಳಕೆ ಪ್ರಕರಣವನ್ನು ಸಿಬಿಐ ತನಿಖೆ ಕೋರಿ ಮಾಜಿ ಸಚಿವ ಎಸ್.ಕೆ.ಕಾಂತಾ ಮತ್ತು ವಕ್ಫ್ ಆಸ್ತಿಗಳ ಒತ್ತುವರಿಯನ್ನು ತೆರವುಗೊಳಿಸಲು ನಿರ್ದೇಶನ ಕೋರಿ ಸಾಮಾಜಿಕ ಕಾರ್ಯಕರ್ತ ಮಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಪಿಐಎಲ್ಗಳನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಜಮೀಲ್ ಪರ ವಕೀಲ ರೆಹಮತ್ ಉಲ್ಲಾ ಕೊತ್ವಾಲ್ ವಾದಿಸಿ, ರಾಜ್ಯದಲ್ಲಿ ವಕ್ಫ್ ಮಂಡಳಿಗೆ ಸೇರಿದ ಒಟ್ಟು 28 ಸಾವಿರ ಎಕರೆ ಜಮೀನು ಒತ್ತುವರಿಯಾಗಿದೆ. ಬೆಂಗಳೂರು ನಗರದಲ್ಲೇ ಒಂದು ಸಾವಿರ ಎಕರೆಗೂ ಅಧಿಕ ಭೂಮಿ ಒತ್ತುವರಿಯಾಗಿದೆ. ಈ ಒತ್ತುವರಿ ತೆರವುಗೊಳಿಸಿ ವಕ್ಫ್ ಮಂಡಳಿ ವಶಕ್ಕೆ ನೀಡಲು ರಾಜ್ಯ ಸರ್ಕಾರ 2013 ಮೇ 10ರಂದು ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಕಾರ್ಯಪಡೆ ರಚಿಸಿ ಆದೇಶಿಸಿತ್ತು. ಈ ಆದೇಶ ಪ್ರಕಟಗೊಂಡು 9 ವರ್ಷ ಕಳೆದಿದ್ದರೂ ಈವರೆಗೂ ಕಾರ್ಯಪಡೆ ಒತ್ತುವರಿ ತೆರವು ಮಾಡಿಲ್ಲ ಎಂದು ಪೀಠಕ್ಕೆ ವಿವರಿಸಿದರು.
ಈ ವಾದ ಪರಿಗಣಿಸಿದ ಪೀಠ, ವಕ್ಫ್ ಮಂಡಳಿಯ ಆಸ್ತಿ ಒತ್ತುವರಿ ತೆರವುಗೊಳಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿ ಪ್ರಮಾಣ ಪತ್ರ ಸಲ್ಲಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿತು. ಅಲ್ಲದೆ, ವಕ್ಫ್ ಮಂಡಳಿ ಆಸ್ತಿ ಒತ್ತುವರಿ ಹಾಗೂ ದುರ್ಬಳಕೆ ಸಂಬಂಧಿಸಿದಂತೆ ರಾಜ್ಯ ಅಲ್ಪಸಂಖ್ಯಾತರ ಆಯೋಗ 2012ರಲ್ಲಿ ಸಲ್ಲಿಸಿರುವ ವಿಶೇಷ ವರದಿಯನ್ನು ವಿಧಾನಮಂಡಲದ ಉಭಯ ಸದನಗಳಲ್ಲಿ ಮಂಡಿಸುವ ಬಗ್ಗೆ ನಿಲುವು ತಿಳಿಸಲು ಸರ್ಕಾರಕ್ಕೆ ಕೊನೆಯ ಅವಕಾಶ ನೀಡಿದ ವಿಚಾರಣೆ ಮುಂದೂಡಿತು.
ಇದನ್ನೂ ಓದಿ:ಆಫ್ಘನ್ ಬಿಕ್ಕಟ್ಟು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮಹತ್ವದ ಸಭೆ