ಕರ್ನಾಟಕ

karnataka

ETV Bharat / city

ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ: ಹೈಕೋರ್ಟ್​​​​ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ - ಹೈಕೋರ್ಟ್ ಸುದ್ದಿ

2021-22ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ ಮುದ್ರಣ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳ ಮುದ್ರಣ ಶೇ.99.74ರಷ್ಟು ಪೂರ್ಣಗೊಂಡಿದೆ ಎಂದು ಹೈಕೋರ್ಟ್​ಗೆ ಸರ್ಕಾರ ಮಾಹಿತಿ ನೀಡಿದೆ.

ಶಾಲೆಗಳಿಗೆ ಪಠ್ಯಪುಸ್ತಕ ಪೂರೈಕೆ : ಹೈಕೋರ್ಟ್​​​​ಗೆ ಮಾಹಿತಿ ನೀಡಿದ ರಾಜ್ಯ ಸರ್ಕಾರ
high court on text book distribution

By

Published : Oct 6, 2021, 11:17 AM IST

ಬೆಂಗಳೂರು: ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಒದಗಿಸಲು ಶೇಕಡಾ 99.74ರಷ್ಟು ಪಠ್ಯಪುಸ್ತಕಗಳ ಮುದ್ರಣ ಕಾರ್ಯ ಪೂರ್ಣಗೊಂಡಿದೆ. ಹಾಗೆಯೇ, ಅವುಗಳನ್ನು ಪೂರೈಸುವ ಕೆಲಸವೂ ಸಮರೋಪಾದಿಯಲ್ಲಿ ಸಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​​ಗೆ ಮಾಹಿತಿ ನೀಡಿದೆ.

ಸರ್ಕಾರಿ ಶಾಲೆಗಳ ಸುಧಾರಣೆಗೆ ಸಂಬಂಧಿಸಿದಂತೆ ನಗರದ ಸಂಜೀವ್ ನರೈನ್ ಮತ್ತಿತರರು ಸಲ್ಲಿಸಿದ್ದ ಪಿಐಎಲ್ ಅರ್ಜಿಯನ್ನು ಹಂಗಾಮಿ ಸಿಜೆ ಎಸ್​​ಸಿ ಶರ್ಮಾ ನೇತತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರಿ ವಕೀಲರು ಮಾಹಿತಿ ನೀಡಿ, ಕರ್ನಾಟಕ ಪಠ್ಯಪುಸ್ತಕ ಸೊಸೈಟಿ ಸಲ್ಲಿಸಿರುವ ತಾಜಾ ಮಾಹಿತಿಯಂತೆ, 2021-22ನೇ ಶೈಕ್ಷಣಿಕ ವರ್ಷಕ್ಕೆ ಪಠ್ಯಪುಸ್ತಕ ಮುದ್ರಣ ಕಾರ್ಯ ಸಮರೋಪಾದಿಯಲ್ಲಿ ನಡೆದಿದೆ. 1ರಿಂದ 10ನೇ ತರಗತಿವರೆಗಿನ ಪಠ್ಯಪುಸ್ತಕಗಳ ಮುದ್ರಣ ಶೇ.99.74ರಷ್ಟು ಪೂರ್ಣಗೊಂಡಿದೆ. ಪುಸ್ತಕಗಳನ್ನು ಶಾಲೆಗಳಿಗೆ ಪೂರೈಕೆ ಮಾಡುವ ಕೆಲಸವೂ ಭರದಿಂದ ಸಾಗಿದೆ ಎಂದರು.

ಹೇಳಿಕೆ ದಾಖಲಿಸಿಕೊಂಡ ಪೀಠ, ಎರಡು ವಾರಗಳಲ್ಲಿ ಪಠ್ಯಪುಸ್ತಕ ಮುದ್ರಣ ಮತ್ತು ಪೂರೈಕೆ ಕಾರ್ಯ ಪೂರ್ಣಗೊಳಿಸಿ ಆ ಕುರಿತಂತೆ ಪ್ರಮಾಣಪತ್ರ ಸಲ್ಲಿಸಿ ಎಂದು ನಿರ್ದೇಶಿಸಿ ವಿಚಾರಣೆಯನ್ನು ಅ.23ಕ್ಕೆ ಮುಂದೂಡಿತು.

ಈ ಹಿಂದಿನ ವಿಚಾರಣೆ ವೇಳೆ ಸರ್ಕಾರ ಸೆ.30ರೊಳಗೆ ಎಲ್ಲ ಶಾಲೆಗಳಿಗೆ ಶೇ.100ರಷ್ಟು ಪಠ್ಯಪುಸ್ತಕ ಒದಗಿಸುವುದಾಗಿ ತಿಳಿಸಿತ್ತು. ಆದರೆ ವಿಳಂಬವಾಗಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಪೀಠ, ಪಠ್ಯಪುಸ್ತಕ ಪೂರೈಸದೆ ಶಾಲೆಗಳನ್ನು ಆರಂಭಿಸುತ್ತಿರುವುದು ಅರ್ಥಹೀನ. ಶಾಲೆಗಳನ್ನು ಆರಂಭಿಸುವ ಮುನ್ನವೇ ಪಠ್ಯಪುಸ್ತಕಗಳನ್ನು ಒದಗಿಸಬೇಕಿತ್ತು. ಪಠ್ಯಪುಸ್ತಕಗಳನ್ನು ಒದಗಿಸದೆ ಮಕ್ಕಳನ್ನು ತರಗತಿಗೆ ಹಾಜರಾಗಿ ಎಂದು ಹೇಳುವುದು ಸರಿಯಲ್ಲ ಎಂದಿತ್ತು.

ಇದನ್ನೂ ಓದಿ:ಪೋಷಕರ ಬುದ್ದಿಮಾತಿಗೆ ನೊಂದು ಆತ್ಮಹತ್ಯೆಗೆ ಶರಣಾದ ಯುವತಿ

ABOUT THE AUTHOR

...view details