ಬೆಂಗಳೂರು:ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಿದರೆ ಅವುಗಳನ್ನು ಮುಲಾಜಿಲ್ಲದೆ ತೆರವು ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಬಿದಲೂರು ಗ್ರಾಮ ಪಂಚಾಯತಿಯ ಬಸ್ ನಿಲ್ದಾಣದಲ್ಲಿ ವಾಲ್ಮೀಕಿ ಪ್ರತಿಮೆ ಸ್ಥಾಪನೆ ಪ್ರಶ್ನಿಸಿ ಕುವೆಂಪು ಒಕ್ಕಲಿಗರ ಸಂಘ ಮತ್ತು ಬಿದಲೂರು ಗ್ರಾಮದ ನಿವಾಸಿಗಳು ಸಲ್ಲಿಸಿರುವ ಪಿಐಎಲ್ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದ ಪೀಠ, ಸಾರ್ವಜನಿಕ ಪ್ರದೇಶದಲ್ಲಿ ಪ್ರತಿಮೆ ಸ್ಥಾಪಿಸುವುದಕ್ಕೆ ನಿರ್ಬಂಧವಿದೆ. ಅದು ದೇವರ ಮೂರ್ತಿಯಾಗಲಿ ಅಥವಾ ಮಹಾನ್ ವ್ಯಕ್ತಿಯ ಪ್ರತಿಮೆಯಾಗಲಿ ಸಾರ್ವಜನಿಕ ಸ್ಥಳದಲ್ಲಿ ಸ್ಥಾಪಿಸುವಂತಿಲ್ಲ. ಬೇಕಾದರೆ ಸ್ವಂತ ಜಾಗದಲ್ಲಿ ಪ್ರತಿಮೆ ಸ್ಥಾಪಿಸಿಕೊಳ್ಳಲಿ, ಆರಾಧಿಸಲಿ. ಅದಕ್ಕೆ ನ್ಯಾಯಾಲಯದ ಆಕ್ಷೇಪವಿಲ್ಲ ಎಂದಿತು.