ಬೆಂಗಳೂರು : ಮೈಸೂರಿನಲ್ಲಿ 12 ದಿನದ ಹೆಣ್ಣು ಶಿಶುವನ್ನು ಪೋಷಕರು ಬಿಟ್ಟು ಹೋದ ಪ್ರಕರಣದ ಬಗ್ಗೆ ಸಮಗ್ರ ಪರಿಶೀಲನೆ ನಡೆಸುವಂತೆ ಹೈಕೋರ್ಟ್ ನಿರ್ದೇಶಿಸಿದೆ. ಇದೇ ವೇಳೆ ಪೋಷಕರು ಮಕ್ಕಳನ್ನು ತ್ಯಜಿಸುವ ಪ್ರಕರಣಗಳ ಬಗ್ಗೆ ಕಳವಳ ವ್ಯಕ್ತಪಡಿಸಿದೆ.
ಲಿವಿಂಗ್ ಟುಗೆದರ್ ನಡೆಸುತ್ತಿದ್ದ ಯುವ ದಂಪತಿಗೆ ಜನಿಸಿದ ಹೆಣ್ಣು ಶಿಶುವನ್ನು ಅವರು ಮಕ್ಕಳ ಕಲ್ಯಾಣ ಸಮಿತಿಗೆ ಬಿಟ್ಟು ಹೋಗಿದ್ದರ ಕುರಿತು ಮಾಧ್ಯಮದಲ್ಲಿ ಪ್ರಕಟವಾಗಿದ್ದ ವರದಿಯನ್ನು ಆಧರಿಸಿ ಸರ್ಕಾರೇತರ ಸಂಸ್ಥೆ ಲೆಟ್ಜ್ ಕಿಟ್ ಫೌಂಡೇಷನ್ ದಾಖಲಿಸಿರುವ ಪಿಐಎಲ್ ಅನ್ನು ಸಿಜೆ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಮಕ್ಕಳ ಕಲ್ಯಾಣ ಸಮಿತಿಗಳು ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ನಿಯಮಗಳಿಲ್ಲ ಎಂಬುದನ್ನು ಗಮನಿಸಿ, ಬಾಲ ನ್ಯಾಯ ಕಾಯ್ದೆ ಸೆಕ್ಷನ್ 110ರಡಿ ರಾಜ್ಯ ಸರ್ಕಾರ 3 ತಿಂಗಳಲ್ಲಿ ನಿಯಮಗಳನ್ನು ರೂಪಿಸುವಂತೆ ನಿರ್ದೇಶಿಸಿತು.
ಅಲ್ಲದೆ, ಮಕ್ಕಳ ಕಲ್ಯಾಣ ಸಮಿತಿ ಸೆಕ್ಷನ್ 35ರಡಿ ಮಗುವನ್ನು ತ್ಯಜಿಸಿ ಹೋದವರು ನಿಜವಾದ ಜೈವಿಕ ತಂದೆ ತಾಯಿಗಳೇ ಎಂಬ ಬಗ್ಗೆ ಹಾಗೂ ಅವರು ಆ ರೀತಿ ಮಗುವನ್ನು ತ್ಯಜಿಸಲು ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಅಂಶಗಳೇನಿವೆ ಎಂಬ ಕುರಿತು ಪರಿಶೀಲಿಸುವಂತೆ ಪೀಠ ನಿರ್ದೇಶಿಸಿತು.
ಇದೇ ವೇಳೆ ಮಕ್ಕಳನ್ನು ಪೋಷಕರು ಈ ರೀತಿ ತ್ಯಜಿಸುತ್ತಿರುವುದು ಮಕ್ಕಳ ಹಕ್ಕುಗಳ ಸ್ಪಷ್ಟ ಉಲ್ಲಂಘನೆ ಎಂದಿತು. ಮೈಸೂರಿನಲ್ಲಿ ಯುವ ದಂಪತಿ 12 ದಿನದ ಹೆಣ್ಣು ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದರು. ಆನಂತರ ಆ ಮಗುವನ್ನು ಸಮಿತಿ ಜೀವನ್ ಜ್ಯೋತಿ ಟ್ರಸ್ಟ್ ಗೆ ಒಪ್ಪಿಸಿತ್ತು.