ಬೆಂಗಳೂರು: ರಾಜ್ಯದಲ್ಲಿ ಶಬ್ದ ಮಾಲಿನ್ಯ ಅಳೆಯಲು ಒಂದು ಪೊಲೀಸ್ ಠಾಣೆಗೆ ಒಂದೇ ಶಬ್ದ ಮಾಲಿನ್ಯ ಅಳೆಯುವ ಮಾಪಕ ಇದ್ದರೆ ಸಾಕು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಲ್ಲಿಸಿರುವ ಪ್ರಮಾಣ ಪತ್ರಕ್ಕೆ ಹೈಕೋರ್ಟ್ ಆಕ್ಷೇಪ ವ್ಯಕ್ತಪಡಿಸಿದೆ.
ಶಬ್ದ ಮಾಲಿನ್ಯ ನಿಯಂತ್ರಣ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಲು ಕೋರಿ ಇಂದಿರಾನಗರ ನಿವಾಸಿಗಳ ಸಂಘ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ. ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಡಿಜಿಪಿ ಪ್ರವೀಣ್ ಸೂದ್ ಅವರ ಪ್ರಮಾಣ ಪತ್ರವನ್ನು ಪೀಠಕ್ಕೆ ಸಲ್ಲಿಸಿದರು.
ಬಳಿಕ ವಿವರಣೆ ನೀಡಿ, ಡಿಜಿಪಿ ಅವರು ಹೇಳಿರುವಂತೆ ರಾಜ್ಯದ ಪ್ರತಿಯೊಂದು ಪೊಲೀಸ್ ಠಾಣೆಗೆ ಒಂದು ಶಬ್ದ ಮಾಲಿನ್ಯ ಅಳತೆ ಮಾಡುವ ಮಾಪಕ ಸಾಕು. ಪ್ರಸ್ತುತ ಬೆಂಗಳೂರಿನ ಎಲ್ಲಾ 108 ಪೊಲೀಸ್ ಠಾಣೆಗಳಿಗೂ ಮಾಪಕಗಳನ್ನು ಒದಗಿಸಲಾಗಿದೆ. ರಾಜ್ಯದ ಇತರೆ ಭಾಗದ ಪೊಲೀಸ್ ಠಾಣೆಗಳಿಗೆ 243 ಮಾಪಕಗಳನ್ನು ಖರೀದಿಸಲಾಗುತ್ತದೆ ಎಂದರು.
ಇದಕ್ಕೆ ಆಕ್ಷೇಪಿಸಿದ ಪೀಠ, ಹಬ್ಬಗಳ ಸಂದರ್ಭದಲ್ಲಿ ಒಮ್ಮೆಲೆ ಹಲವು ದೂರುಗಳು ಬಂದರೆ ಹೇಗೆ ನಿಭಾಯಿಸುತ್ತಾರೆ? ಒಂದೊಮ್ಮೆ ಒಂದೇ ಠಾಣೆಗೆ ಒಟ್ಟಿಗೆ ಹತ್ತು ದೂರು ಬಂದರೆ ಹೇಗೆ ನಿರ್ವಹಿಸುತ್ತಾರೆ? ಒಂದು ಪೊಲೀಸ್ ಠಾಣೆಗೆ ಒಂದೇ ಮಾಪಕ ಸಾಕಾ?. ಒಂದು ವೇಳೆ ಇರುವ ಒಂದು ಯಂತ್ರ ಕೆಟ್ಟು ಹೋದರೆ ಮಾಡುವುದೇನು? ಎಂದು ಪ್ರಶ್ನಿಸಿತು. ಜೊತೆಗೆ ಡಿಜಿಪಿ ಯಾವ ಆಧಾರದಲ್ಲಿ ಹೀಗೆ ಹೇಳಿದ್ದಾರೆ? ವಾಸ್ತವವಾಗಿ ಎಷ್ಟು ಮಾಪಕಗಳ ಅಗತ್ಯವಿದೆ ಎಂಬ ಬಗ್ಗೆ ಅವರೊಂದಿಗೆ ಸಮಾಲೋಚಿಸಿ ವಿವರಣೆ ನೀಡಿ ಎಂದು ಸರ್ಕಾರದ ಪರ ವಕೀಲರಿಗೆ ಸೂಚಿಸಿ, ಜುಲೈ 2ಕ್ಕೆ ವಿಚಾರಣೆ ಮುಂದೂಡಿತು.
ಇದೇ ವೇಳೆ ಶಬ್ದ ಮಾಲಿನ್ಯ ಕಾಯ್ದೆ ಜಾರಿಗೆ ಸಂಬಂಧಿಸಿದಂತೆ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ 2015 ರಲ್ಲಿ ಹೊರಡಿಸಿದ್ದ ಶಿಷ್ಟಾಚಾರ ಅಂತಿಮವೇ ಅಥವಾ ಪರಿಷ್ಕರಿಸಿ ಹೊಸ ಶಿಷ್ಟಾಚಾರ ಹೊರಡಿಸಲಾಗಿದೆಯೇ ಎಂಬ ಬಗ್ಗೆ ತಿಳಿಸುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರಿಗೂ ಸೂಚಿಸಿತು.