ಕರ್ನಾಟಕ

karnataka

ETV Bharat / city

ಕೋಲಾರ ಜಿಲ್ಲಾ ನ್ಯಾಯಾಲಯ ನಿರ್ಮಾಣ ಕಾಮಗಾರಿ ವಿವರ ನೀಡದ ಸರ್ಕಾರ: ಹೈಕೋರ್ಟ್ ತರಾಟೆ - ಕರ್ನಾಟಕ ಹೈಕೋರ್ಟ್ ಲೇಟೆಸ್ಟ್ ಸುದ್ದಿ

ಶಿಥಿಲಗೊಂಡಿರುವ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡಗಳನ್ನು ತೆರವುಗೊಳಿಸಿ ಹೊಸದಾಗಿ ಕೋರ್ಟ್ ಕಟ್ಟಡ ನಿರ್ಮಾಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ಇಂದು ನಡೆದಿದೆ.

high-court-objecting-government-on-kolar-district-court-issu
ಕೋಲಾರ ಜಿಲ್ಲಾ ನ್ಯಾಯಾಲಯ ನಿರ್ಮಾಣ ಕಾಮಗಾರಿ ವಿವರ ನೀಡದ ಸರ್ಕಾರ: ಹೈಕೋರ್ಟ್ ತರಾಟೆ

By

Published : Oct 22, 2021, 2:27 AM IST

ಬೆಂಗಳೂರು : ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಕೈಗೊಂಡಿರುವ ಮೂಲ ಸೌಕರ್ಯ ಕಾಮಗಾರಿಯ ಪ್ರಗತಿ ಕುರಿತು ಸಮರ್ಪಕ ಮಾಹಿತಿ ನೀಡದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.

ಶಿಥಿಲಗೊಂಡಿರುವ ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಕಟ್ಟಡಗಳನ್ನು ತೆರವುಗೊಳಿಸಿ ಹೊಸದಾಗಿ ಕೋರ್ಟ್ ಕಟ್ಟಡ ನಿರ್ಮಾಣ ಮಾಡಲು ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ವಕೀಲ ವಿ.ವೆಂಕಟಾಚಲ ಗೌಡ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತು.

ಸರ್ಕಾರಿ ವಕೀಲರು ಹಿಂದಿನ ವಿಚಾರಣೆ ವೇಳೆ ಅರ್ಜಿ ಸಂಬಂಧ ಮೆಮೊ ಸಲ್ಲಿಸಿ, ಕೋಲಾರ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸಂಕೀರ್ಣದಲ್ಲಿ ಐದು ಕಾಮಗಾರಿ ಕೈಗೆತ್ತಿಕೊಳ್ಳಲು ಸರ್ಕಾರವು ಒಟ್ಟು 60 ಲಕ್ಷ ರೂ ಬಿಡುಗಡೆ ಮಾಡಿದೆ. ಅದರಲ್ಲಿ ಮೂರು ಕಾಮಗಾರಿಗಳನ್ನು ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಉಳಿದ ಎರಡು ಕಾಮಗಾರಿಗಳಿಗೆ ಗುತ್ತಿಗೆ ಅಂತಿಮಗೊಳಿಸಲಾಗಿದೆ. ಕಾಮಗಾರಿಯನ್ನು ಅಂದಾಜು ಎಂಟು ವಾರಗಳಲ್ಲಿ ಪೂರ್ಣಗೊಳಿಸಲಾಗುವುದು ಹಾಗೂ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಲಾಗುವುದು ಎಂದು ತಿಳಿಸಿದ್ದರು.

ಅದನ್ನು ದಾಖಲಿಸಿಕೊಂಡಿದ್ದ ಪೀಠ, ಅರ್ಜಿ ಕುರಿತು ಮುಂದಿನ ವಿಚಾರಣೆ ವೇಳೆ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಬೇಕು. ಹಾಗೆಯೇ, ಕೋರ್ಟ್ ಸಂಕೀರ್ಣದ ಮುಂಭಾಗದಲ್ಲಿರುವ ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಹಳೆ ಜಿಲ್ಲಾಧಿಕಾರಿ ಕಟ್ಟಡವನ್ನು (ಸದ್ಯ ಬಳಸದೇ ಇರುವ) ಭಾರತೀಯ ಪುರಾತತ್ವ ಇಲಾಖೆ ಸುಪರ್ದಿಗೆ ಪಡೆದ ವಿಚಾರದಲ್ಲಿ ಅಗತ್ಯ ದಾಖಲೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿತ್ತು.

ಅದರಂತೆ ಅರ್ಜಿ ಗುರುವಾರ ವಿಚಾರಣೆಗೆ ಬಂದಾಗ ನ್ಯಾಯಪೀಠ ಪ್ರತಿಕ್ರಿಯಿಸಿ, ಸರ್ಕಾರಿ ವಕೀಲರಿಂದ ಕಾಮಗಾರಿ ಪ್ರಗತಿಯ ಮಾಹಿತಿ ಕೇಳಿತು. ಇದಕ್ಕೆ ಉತ್ತರಿಸಿದ ಸರ್ಕಾರಿ ವಕೀಲರು, 2021ರ ಆಗಸ್ಟ್​​ 19ರಂದು ನ್ಯಾಯಾಲಯ ನೀಡಿರುವ ನಿರ್ದೇಶನದ ಕುರಿತು ತಮಗೆ ಮಾಹಿತಿ ಇಲ್ಲ ಎಂದರು.

ಇದರಿಂದ ಬೇಸರ ವ್ಯಕ್ತಪಡಿಸಿದ ಪೀಠ, ನ್ಯಾಯಾಲಯದ ನಿರ್ದೇಶನದ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಸರ್ಕಾರಿ ವಕೀಲರು ಹೇಳಿಕೆ ನೀಡಿದ್ದಾರೆ. ಸರ್ಕಾರಿ ವಕೀಲರ ಇಂತಹ ಹೇಳಿಕೆ ನೀಡುವುದು ಸರಿಯಲ್ಲ. ಅದನ್ನು ನ್ಯಾಯಾಲಯವು ಒಪ್ಪುವುದಿಲ್ಲ ಎಂದು ನುಡಿಯಿತು. ಅಲ್ಲದೆ, ಒಂದು ವಾರದೊಳಗೆ ಕಾಮಗಾರಿ ಪ್ರಗತಿ ಕುರಿತು ಮಾಹಿತಿ ನೀಡಬೇಕು. ಹಾಗೆಯೇ, ಹಳೆ ಜಿಲ್ಲಾಧಿಕಾರಿ ಕಟ್ಟಡವನ್ನು ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಗೆ ಪಡೆದ ವಿಚಾರದಲ್ಲಿ ಅಗತ್ಯ ದಾಖಲೆ ಒದಗಿಸುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿತು.

ಇದನ್ನೂ ಓದಿ:ಚಿಕ್ಕಮಗಳೂರು: ಸೆಲ್ಫಿ ತೆಗೆಯಲು ಹೋಗಿ ಜಲಪಾತದ ಪ್ರಪಾತಕ್ಕೆ ಬಿದ್ದ ಯುವಕ

ABOUT THE AUTHOR

...view details