ಕರ್ನಾಟಕ

karnataka

ETV Bharat / city

ಉತ್ತರಕನ್ನಡದಲ್ಲಿ ಅಣೆಕಟ್ಟು ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್ - ಬೆಂಗಳೂರು ಲೇಟೆಸ್ಟ್​ ನ್ಯೂಸ್​

ಗಂಗಾವಳ್ಳಿ ನದಿಗೆ ಅಡ್ಡಲಾಗಿ ಸುಮಾರು 158 ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ರಾಜ್ಯ ಸರ್ಕಾರ 2017ರಲ್ಲಿ ಆದೇಶಿಸಿದೆ. ಇದನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

High Court notice to the government on dam construction in Uttarakannada
ಉತ್ತರಕನ್ನಡದಲ್ಲಿ ಅಣೆಕಟ್ಟು ನಿರ್ಮಾಣ ಪ್ರಶ್ನಿಸಿ ಅರ್ಜಿ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್

By

Published : Jan 14, 2021, 6:26 PM IST

ಬೆಂಗಳೂರು: ಉತ್ತರಕನ್ನಡ ಜಿಲ್ಲೆಯ ಗಂಗಾವಳ್ಳಿ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಾಣ ಮಾಡುವ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಅಂಕೋಲ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷ ಶಿವರಾಮ್ ಗಾಂವ್ಕರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯದರ್ಶಿ, ಉತ್ತರ ಕನ್ನಡ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒಗೆ ನೋಟಿಸ್ ಜಾರಿ ಮಾಡಿದೆ. ಅಲ್ಲದೆ, ಅಣೆಕಟ್ಟು ನಿರ್ಮಾಣ ಕಾಮಗಾರಿ ಹಾಗೂ ಯೋಜನೆ ಸಂಬಂಧ ಕೈಗೊಳ್ಳುವ ಯಾವುದೇ ಕ್ರಮಗಳು ಅರ್ಜಿ ಕುರಿತು ನ್ಯಾಯಾಲಯ ಹೊರಡಿಸುವ ಅಂತಿಮ ಆದೇಶಕ್ಕೆ ಒಳಪಟ್ಟಿರುತ್ತವೆ ಎಂದು ಮಧ್ಯಂತರ ಆದೇಶ ನೀಡಿದೆ.

ಅರ್ಜಿದಾರರ ಪರ ವಕೀಲ ಹೆಚ್.ಸುನೀಲ್ ಕುಮಾರ್ ವಾದ ಮಂಡಿಸಿ, ಗಂಗಾವಳ್ಳಿ ನದಿಗೆ ಅಡ್ಡಲಾಗಿ ಸುಮಾರು 158 ಕೋಟಿ ರೂಪಾಯಿ ವೆಚ್ಚದಲ್ಲಿ ಅಣೆಕಟ್ಟು ನಿರ್ಮಾಣ ಮಾಡಲು ರಾಜ್ಯ ಸರ್ಕಾರ 2017ರಲ್ಲಿ ಆದೇಶಿಸಿದೆ. ಯೋಜನೆಗಾಗಿ ಕೇಂದ್ರ ಸರ್ಕಾರ 75 ಕೋಟಿ ರೂಪಾಯಿ ಮತ್ತು ರಾಜ್ಯ ಸರ್ಕಾರವು 85 ಕೋಟಿ ರೂಪಾಯಿ ಭರಿಸುತ್ತಿವೆ. ಕಾರವಾರ, ಅಂಕೋಲ ಗ್ರಾಮಗಳು ಮತ್ತು ‘ಸೀ ಬರ್ಡ್’ ಭಾರತೀಯ ನೌಕಾ ನೆಲೆಗೆ ಕುಡಿಯುವ ನೀರು ಒದಗಿಸಲು ಯೋಜನೆ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ, ಆ ಭಾಗದ ಖಾಸಗಿ ಕಂಪನಿಗಳಿಗೆ ನೀರು ಒದಗಿಸುವುದೇ ಸರ್ಕಾರದ ಮುಖ್ಯ ಉದ್ದೇಶ ಎಂದು ದೂರಿದ್ದಾರೆ.

ಓದಿ:ನಮ್ಮನ್ನು ಒಗ್ಗೂಡಿಸಲು ಯೋಗೇಶ್ವರ್ ಎಂಟಿಬಿ ಹತ್ರ ಸಾಲ ಮಾಡಿದ್ದರು: ಸಚಿವ ರಮೇಶ್ ಜಾರಕಿಹೊಳಿ‌

ಸೀ ಬರ್ಡ್ ನೌಕಾ ನೆಲೆಯಿಂದ ಕೇವಲ 20 ಕಿ.ಮೀ ದೂರದಲ್ಲಿ ಕಾಳಿ ನದಿಯಿದ್ದರೂ 58 ಕಿ.ಮೀ.ದೂರದ ಗಂಗಾವಳ್ಳಿ ನದಿಯಿಂದ ನೀರು ಪೂರೈಕೆಗೆ ಸರ್ಕಾರ ಯೋಜಿಸಿದೆ. ಇನ್ನು, ಪರಿಸರ ಪರಿಣಾಮ ಅಧ್ಯಯನ ನಡೆಸದೆ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಅಣೆಕಟ್ಟು ನಿರ್ಮಾಣದಿಂದ ಆ ಭಾಗದ ಅಪಾರ ಪ್ರಮಾಣದ ಔಷಧೀಯ ಗುಣವುಳ್ಳ ಸಸ್ಯಗಳು, ವನ್ಯಜೀವಿ ಹಾಗೂ ಸಸ್ಯಸಂಕುಲ ನಾಶವಾಗಲಿದೆ. 84 ಹೆಕ್ಟೇರ್ ಕೃಷಿ ಜಮೀನು ಮತ್ತು 14.2 ಹೆಕ್ಟೇರ್ ಅರಣ್ಯ ಜಮೀನು ಮುಳುಗಡೆಯಾಗಲಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಅಣೆಕಟ್ಟು ನಿರ್ಮಾಣಕ್ಕೆ ಸ್ಥಳೀಯ ಗ್ರಾಮಸ್ಥರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಯೋಜನೆಗೆ 2008ರಲ್ಲಿ 33.5 ಕೋಟಿ ಮೊತ್ತ ಅಂದಾಜಿಸಲಾಗಿತ್ತು. 2017 ರಲ್ಲಿ 158.62 ಕೋಟಿ ರೂಪಾಯಿ ಅಂದಾಜಿಸಲಾಗಿದೆ. ಇದು ಸಹ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಎಂದು ಅರ್ಜಿದಾರರು ದೂರಿದ್ದಾರೆ. ಹಾಗೆಯೇ, ಯೋಜನೆ ನಿರ್ಮಾಣಕ್ಕೆ 2017ರ ಅ.10ರಂದು ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕೆಂದು ಕೋರಿದ್ದಾರೆ.

ABOUT THE AUTHOR

...view details