ಬೆಂಗಳೂರು: ಸಾರ್ವಜನಿಕ ಉದ್ಯಾನಗಳಿಗೆ ಸಾಕು ನಾಯಿಗಳನ್ನು ಕರೆದುಕೊಂಡು ಬರುವ ಮಾಲೀಕರು ಅವುಗಳ ಜೊತೆಗೆ 'ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್' (ಜೈವಿಕ ವಿಘಟನೀಯ ಚೀಲ ಅಥವಾ ನಾಯಿ ತ್ಯಾಜ್ಯ ಚೀಲ) ತರುವುದನ್ನು ಕಡ್ಡಾಯಗೊಳಿಸಲು ಬಿಬಿಎಂಪಿಗೆ ನಿರ್ದೇಶನ ನೀಡುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಪಾಲಿಕೆಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಕುರಿತು ಕಂಪ್ಯಾಷನ್ ಅನ್‌ಲಿಮಿಟೆಡ್ ಪ್ಲಸ್ ಆ್ಯಕ್ಷನ್ (ಕ್ಯುಪಾ) ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಂಗಾಮಿ ಸಿಜೆ ಸತೀಶ್ ಚಂದ್ರ ಶರ್ಮಾ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಸಾರ್ವಜನಿಕ ಪಾರ್ಕ್ಗಳಲ್ಲಿ ಅನೇಕರು ತಮ್ಮ ಸಾಕು ನಾಯಿಗಳನ್ನು ಕರೆದುಕೊಂಡು ಬರುತ್ತಾರೆ. ಅವುಗಳು ಅಲ್ಲಿ ಮಲ - ಮೂತ್ರ ವಿಸರ್ಜನೆ ಮಾಡುವುದರಿಂದ ಪಾರ್ಕ್ಗೆ ವಾಯು ವಿಹಾರಕ್ಕೆ ಬರುವ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತದೆ. ಆರೋಗ್ಯದ ದೃಷ್ಠಿಯಿಂದ ನಾಯಿಗಳಿಗೂ ವಾಯುವಿಹಾರದ ಅವಶ್ಯಕತೆ ಇರುತ್ತದೆ. ಅದೇ ರೀತಿ ಪಾರ್ಕ್ಗೆ ಬರುವ ಎಲ್ಲರಿಗೂ ಸ್ವಚ್ಛ ವಾತಾವರಣ ಕಲ್ಪಿಸುವ ಜವಾಬ್ದಾರಿಯೂ ಪಾಲಿಕೆ ಮೇಲಿದೆ.
ಈ ಹಿನ್ನೆಲೆಯಲ್ಲಿ ತಮ್ಮ ನಾಯಿಗಳ ಜೊತೆಗೆ ಬರುವ ಅವುಗಳ ಮಾಲೀಕರು ಮತ್ತು ಪೋಷಕರು ತಮ್ಮ ಜೊತೆಗೆ ಸಾಕು ಪ್ರಾಣಿಗಳ ಮಲ - ಮೂತ್ರ ತೆರವುಗೊಳಿಸುವ 'ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್' ಹಾಗೂ ಇತರ ವಸ್ತುಗಳನ್ನು ಕಡ್ಡಾಯವಾಗಿ ತರುವಂತೆ ಕ್ರಮ ಕೈಗೊಳ್ಳಲು ಸರ್ಕಾರ ಹಾಗೂ ಪಾಲಿಕೆಗೆ ಆದೇಶಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.
ಅಲ್ಲದೇ, ಈ ವಿಚಾರಕ್ಕೆ ಸಂಬಂಧಿಸಿದಂತೆ ಘನತ್ಯಾಜ್ಯ ನಿರ್ವಹಣಾ ಬೈಲಾ - 2020 ಹಾಗೂ 2020 ರ ಆ.24 ರ ರಾಜ್ಯ ಸರ್ಕಾರದ ಸುತ್ತೋಲೆಯನ್ನು ಜಾರಿಗೆ ತರುವಂತೆ ಬಿಬಿಎಂಪಿಗೆ ನಿರ್ದೇಶಿಸಬೇಕು. ನಾಯಿಗಳ ಕೊರಳಿಗೆ ಹಗ್ಗ ಹಾಕಿ ಅವುಗಳ ಮಾಲೀಕರು ಇಲ್ಲವೇ ಪೋಷಕರು ಬಯೋಡಿಗ್ರೇಡೆಬಲ್ ಪೂಪ್ ಬ್ಯಾಗ್ಗಳನ್ನು ತಮ್ಮ ಜೊತೆಗೆ ತಂದರೆ ಮಾತ್ರ ನಾಯಿಗಳಿಗೆ ಪಾರ್ಕ್ ಪ್ರವೇಶಕ್ಕೆ ಅನುಮತಿ ನೀಡಲು ಪಾಲಿಕೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.