ಬೆಂಗಳೂರು:ನಗರದಲ್ಲಿ ಮಿತಿ ಮೀರಿರುವ ಸಂಚಾರ ದಟ್ಟಣೆಯ ನಡುವೆ ಆ್ಯಂಬುಲೆನ್ಸ್ಗಳ ಸುಗಮ ಸಂಚಾರಕ್ಕೆ ಕಂಟ್ರೋಲ್ ರೂಂ ವ್ಯವಸ್ಥೆಯನ್ನು ಶೀಘ್ರವಾಗಿ ಕಾರ್ಯಗತಗೊಳಿಸುವಂತೆ ಹೈಕೋರ್ಟ್ ಸೂಚಿಸಿದೆ.
ಈ ಕುರಿತು ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ವಿವರಿಸಿ, ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ಸಂಚಾರಕ್ಕೆ ಕಂಟ್ರೋಲ್ ರೂಂ ಸ್ಥಾಪಿಸಲು ಯೋಜನೆ ರೂಪಿಸಿದ್ದು, ಪ್ರಸ್ತಾವನೆ ಹಣಕಾಸು ಇಲಾಖೆ ಮುಂದಿಡಲಾಗಿದೆ. ಅನುಮೋದನೆ ಸಿಕ್ಕ ಕೂಡಲೇ ಟೆಂಡರ್ ಪ್ರಕ್ರಿಯೆ ಶುರು ಮಾಡಲಾಗುವುದು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಟೆಂಡರ್ ಯೋಜನೆಯನ್ನು ಜಾರಿ ಮಾಡಿ. ಆದರೆ, ಎಲ್ಲ ಪ್ರಕ್ರಿಯೆ ಮುಗಿಯಲು ಕಾಲಾವಕಾಶ ತೆಗೆದುಕೊಳ್ಳುತ್ತದೆ. ಅಲ್ಲಿಯವರೆಗೂ ಟ್ರಾಫಿಕ್ ಪೊಲೀಸರು ಮತ್ತು ಆ್ಯಂಬುಲೆನ್ಸ್ ಆಪರೇಟರ್ಗಳು ಪರಸ್ಪರ ಮಾಹಿತಿ ವಿನಿಮಯ ಮಾಡಿಕೊಂಡು ಕಾರ್ಯ ನಿರ್ವಹಿಸುವುದು ಉತ್ತಮ. ತುರ್ತು ಪರಿಸ್ಥಿತಿಯಲ್ಲಿರುವ ರೋಗಿಗಳನ್ನು ಕರೆತರಲು ಹೋಗುವ ಮುನ್ನ ಆ್ಯಂಬುಲೆನ್ಸ್ ಆಪರೇಟರ್ಗಳು ಈ ಕುರಿತು ಪೊಲೀಸರೊಂದಿಗೆ ಮಾಹಿತಿ ವಿನಿಯಮ ಮಾಡಿಕೊಳ್ಳಲಿ. ರೋಗಿ ಕರೆದೊಯ್ಯುವ ಮೊದಲೇ ಮಾಹಿತಿ ನೀಡಿದರೆ, ಪೊಲೀಸರಿಗೂ ಸಂಚಾರ ದಟ್ಟಣೆ ನಿರ್ವಹಣೆ ಮಾಡಲು ಮುಂಚಿನ ಕಾಲಾವಕಾಶ ಸಿಗುತ್ತದೆ.
ಆ್ಯಂಬುಲೆನ್ಸ್ ಡ್ರೈವರ್ ಸಾಗುವ ದಾರಿಯಲ್ಲಿ ಸುಗಮ ಸಂಚಾರಕ್ಕೆ ಆ್ಯಂಬುಲೆನ್ಸ್ ಆಪರೇಟರ್ಗಳು ಮತ್ತು ಸಂಚಾರ ಪೊಲೀಸರು ಜಂಟಿಯಾಗಿ ಶ್ರಮಿಸಿದರೆ, ರೋಗಿ ಶೀಘ್ರವಾಗಿ ಆಸ್ಪತ್ರೆ ತಲುಪಬಹುದಾಗಿದೆ. ಈ ಸಲಹೆಯನ್ನು ಪಾಲಿಸಲು ಕ್ರಮ ಕೈಗೊಳ್ಳಿ ಎಂದು ಪೀಠ ಸೂಚಿಸಿತು. ಹಾಗೆಯೇ ಕಂಟ್ರೋಲ್ ರೂಂ ಟೆಂಡರನ್ನು ಆಗಸ್ಟ್ 13ರ ಒಳಗೆ ಪೂರ್ಣಗೊಳಿಸಲು ಕ್ರಮ ವಹಿಸಿ ಎಂದು ಸೂಚಿಸಿದೆ.