ಬೆಂಗಳೂರು: ರಾಜ್ಯದ ಎಲ್ಲಾ ನ್ಯಾಯಾಲಯ ಮತ್ತು ಕೋರ್ಟ್ ಕಚೇರಿಗಳಲ್ಲಿ ಎ-4 ಸೈಜ್ ಅಳತೆಯ ಹಾಳೆಗಳಲ್ಲಿ ಎರಡೂ ಬದಿ ಮುದ್ರಣ ಮಾಡಿ ಬಳಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಸುತ್ತೋಲೆ ಹೊರಡಿಸಿದ್ದಾರೆ.
ಮುಖ್ಯ ನ್ಯಾಯಮೂರ್ತಿ ಆದೇಶಾನುಸಾರ ಹೊರಡಿಸಿರುವ ಸುತ್ತೋಲೆಯಲ್ಲಿ, ಕರ್ನಾಟಕ ಹೈಕೋರ್ಟ್ ನಿಯಮಗಳು 1959ಕ್ಕೆ ತಿದ್ದುಪಡಿ ತರಲಾಗಿದೆ. ಅದರಂತೆ ಇನ್ಮುಂದೆ ರಾಜ್ಯದ ನ್ಯಾಯಾಲಯಗಳಲ್ಲಿ ಎ-4 ಸೈಜ್ ಅಳತೆಯ ಹಾಳೆಗಳಲ್ಲಿ ಎರಡೂ ಬದಿ ಮುದ್ರಣ ಮಾಡಿ ಬಳಸಬೇಕು ಎಂದು ಸೂಚಿಸಲಾಗಿದೆ.
ಸುಪ್ರೀಂ ಕೋರ್ಟ್ 2020ರ ಮಾರ್ಚ್ 5ರಂದು ಎ-4 ಅಳತೆಯ ಹಾಳೆಗಳಲ್ಲಿ ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸುವಂತೆ ನ್ಯಾಯಾಲಯಗಳಿಗೆ ಸೂಚಿಸಿ ಸುತ್ತೋಲೆ ಹೊರಡಿಸಿದೆ. ಆದರೆ ಹೈಕೋರ್ಟ್ ಸೇರಿದಂತೆ ರಾಜ್ಯ ನ್ಯಾಯಾಲಯಗಳಲ್ಲಿ ಎ-4 ಅಳತೆಯ ಕಾಗದಗಳಲ್ಲಿ ಒಂದು ಬದಿಯಲ್ಲಿ ಮಾತ್ರ ಮುದ್ರಣ ಮಾಡಿ ಬಳಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸಲು ನಿರ್ದೇಶಿಸಬೇಕು ಎಂದು ಕೋರಿ ಕಾನೂನು ವಿದ್ಯಾರ್ಥಿಗಳಾದ ಆಗೃತಿ ಅಗರ್ವಾಲ್ ಹಾಗೂ ಎಂ.ಭಾವನಾ ಅರ್ಜಿ ಸಲ್ಲಿಸಿದ್ದರು.
ಇದನ್ನೂ ಓದಿ:140 ಜನರ ಜಾಗದಲ್ಲಿ 12 ಜನ ಹೇಗೆ ಕಾರ್ಯ ನಿರ್ವಹಿಸಲು ಸಾಧ್ಯ?: ಕೃಷಿ ಇಲಾಖೆ ಬಗ್ಗೆ ಶಿವಲಿಂಗೇ ಗೌಡ ಕಿಡಿ
ಪರಿಸರ ಸಂರಕ್ಷಣೆ ಮಾಡಲು ಹಾಗೂ ಕಾಗದದ ಬಳಕೆ ಹೆಚ್ಚಾಗದಿರಲು ಎರಡೂ ಬದಿಯಲ್ಲಿ ಮುದ್ರಣ ಮಾಡಿ ಬಳಸುವುದು ಹೆಚ್ಚು ಉಪಯುಕ್ತ. ಆದ್ದರಿಂದ ಮುದ್ರಣಕ್ಕೆ ಕಾಗದದ ಎರಡೂ ಬದಿ ಬಳಕೆ ಮಾಡಲು ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಮಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಎರಡೂ ಬದಿ ಮುದ್ರಣಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಿತ್ತು. ಇದೀಗ ಸುತ್ತೋಲೆ ಮೂಲಕ ಎಲ್ಲಾ ನ್ಯಾಯಾಲಯಗಳಿಗೆ ಸೂಚನೆ ನೀಡಲಾಗಿದೆ.