ಬೆಂಗಳೂರು:ನಗರದ ಉತ್ತರಹಳ್ಳಿ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಶಾಸಕ ಎಂ. ಕೃಷ್ಣಪ್ಪ ಅವರಿಗೆ ನೋಟಿಸ್ ಜಾರಿ ಮಾಡಿರುವ ಹೈಕೋರ್ಟ್, ಕೆರೆ ಒತ್ತುವರಿ ಸಂಬಂಧ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.
ಈ ಕುರಿತು ನಗರದ ಪ್ರಜಾ ಹಕ್ಕುಗಳ ವೇದಿಕೆ ಮತ್ತು ಪತ್ರಕರ್ತ ಡಿ. ರಾಮಸ್ವಾಮಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಅರ್ಜಿದಾರರ ಪರ ವಕೀಲ ವಿ.ಕೆ. ನಾರಾಯಣಸ್ವಾಮಿ ಅವರ ವಾದ ಆಲಿಸಿದ ಪೀಠ, ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಕಂದಾಯ ಇಲಾಖೆ ಕಾರ್ಯದರ್ಶಿ, ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಹಾಗೂ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.
ಅಲ್ಲದೇ, ಅರ್ಜಿದಾರರು ಆರೋಪಿಸಿರುವಂತೆ ಉತ್ತರಹಳ್ಳಿ ಕೆರೆಯ ಸರ್ವೆ ನಂಬರ್ 111ರಲ್ಲಿ 15.16 ಎಕರೆ ಭೂಮಿ ಒತ್ತುವರಿಯಾಗಿದೆಯೇ ಎಂಬುದನ್ನು ಗುರುತಿಸಲು ಹಿರಿಯ ಕಂದಾಯ ಅಧಿಕಾರಿಯೊಬ್ಬರನ್ನು ನಿಯೋಜಿಸಬೇಕು. ಅವರ ನೇತೃತ್ವದಲ್ಲಿ ಕೆರೆ ಪ್ರದೇಶವನ್ನು ಸರ್ವೆ ನಡೆಸಿ ಆ ಕುರಿತ ವರದಿಯನ್ನು ಆಕ್ಷೇಪಣೆಯೊಂದಿಗೆ ಮುಂದಿನ ಒಂದು ತಿಂಗಳ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನಿರ್ದೇಶಿಸಿತು.
ಇದನ್ನೂ ಓದಿ...ದುರ್ಬಲ ವರ್ಗಗಳಿಗೆ ಉಚಿತ ಕಾನೂನು ಸೇವೆ: ಪಡೆದುಕೊಳ್ಳುವುದು ಹೇಗೆ?
ಅರ್ಜಿದಾರರ ಆರೋಪ: ಬನಶಂಕರಿ 5ನೇ ಹಂತ ನಿರ್ಮಾಣಕ್ಕಾಗಿ ಬಿಡಿಎ 1988ರಲ್ಲಿ ನೋಟಿಫೈ ಮಾಡಿದ್ದ ಉತ್ತರಹಳ್ಳಿಯ ಸರ್ವೆ 103/1ರಲ್ಲಿನ 36 ಗುಂಟೆ ಹಾಗೂ 103/2ರಲ್ಲಿನ 39 ಗುಂಟೆ ಭೂಮಿಯನ್ನು ಬೆಂಗಳೂರು ಎಂ. ಕೃಷ್ಣಪ್ಪ ಅವರು ಅಕ್ರಮವಾಗಿ 1994ರಲ್ಲಿ ಖರೀದಿಸಿದ್ದರು. ಬಳಿಕ 2007ರಲ್ಲಿ ಈ ಭೂಮಿಯನ್ನು ಅಕ್ರಮವಾಗಿ ಡಿನೋಟಿಫೈ ಮಾಡಿಸಿಕೊಂಡಿದ್ದರು. ಆ ಬಳಿಕ ಇವೇ ಜಮೀನುಗಳ ಪಕ್ಕದಲ್ಲಿದ್ದ ಉತ್ತರಹಳ್ಳಿ ಕೆರೆಗೆ ಸೇರಿದ ಸರ್ವೆ ನಂಬರ್ 111ರಲ್ಲಿನ 15.16 ಎಕರೆ ಭೂಮಿಯನ್ನು ರೈನ್ಬೋ ಹೋಟೆಲ್ ನಿರ್ಮಾಣಕ್ಕಾಗಿ ಒತ್ತುವರಿ ಮಾಡಿದ್ದಾರೆ.
ಇಷ್ಟಲ್ಲದೇ, ಉತ್ತರಹಳ್ಳಿ ಹೋಬಳಿಯ ವಡ್ಡರಪಾಳ್ಯ ಗ್ರಾಮದ ಗೋಮಾಳಕ್ಕೆ ಸೇರಿದ ಸರ್ವೆ ನಂಬರ್ 32 ರಿಂದ 40ವರೆಗಿನ (ಹಳೆ ಸರ್ವೆ ನಂಬರ್ 8) 10ಎಕರೆ ಭೂಮಿಗೆ ನಕಲಿ ದಾಖಲೆಗಳನ್ನು ಸೃಷ್ಟಿಸಿ, ಅಲ್ಲಿ ನಿವೇಶನಗಳನ್ನು ನಿರ್ಮಿಸಿ ಮಾರಾಟ ಮಾಡಿದ್ದಾರೆ. ಈ ಸಂಬಂಧ ಸಿಎಂ, ಕಂದಾಯ ಸಚಿವರು, ಸ್ಪೀಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಲೋಕಾಯುಕ್ತ, ಭ್ರಷ್ಟಾಚಾರ ನಿಗ್ರಹದಳ ಸೇರಿದಂತೆ ಸಂಬಂಧಿಸಿದ ಪ್ರಾಧಿಕಾರಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ. ಹಾಗೆಯೇ, ಒತ್ತುವರಿಯಾಗಿರುವ ಜಾಗವನ್ನು ತೆರವು ಮಾಡಿ ಸರ್ಕಾರದ ವಶಕ್ಕೆ ತೆಗೆದುಕೊಳ್ಳುವಂತೆ ಆದೇಶಿಸಬೇಕು ಎಂದು ಮನವಿ ಮಾಡಿದ್ದಾರೆ.