ಬೆಂಗಳೂರು:ಧಾರವಾಡ ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಸಂಸ್ಥೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ಹಾಗೂ ನ್ಯಾಯಾಲಯದ ಆದೇಶದ ಹೊರತಾಗಿಯೂ ವೈದ್ಯಕೀಯ ಶಿಕ್ಷಣ ಇಲಾಖೆ ಅಧಿಕಾರಿಗಳು ವಿಚಾರಣೆಗೆ ಹಾಜರಾಗದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಡಿಮಾನ್ಸ್ಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸದ ವಿಚಾರವಾಗಿ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಸೋಮವಾರ ವಿಚಾರಣೆ ನಡೆಸಿತು.
ಹಿಂದಿನ ವಿಚಾರಣೆ ವೇಳೆ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆ ವೈದ್ಯಕೀಯ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ವಿಚಾರಣೆಗೆ ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಬೇಕಿತ್ತು. ಆದರೆ, ಅಧಿಕಾರಿ ವಿಚಾರಣೆಗೆ ಹಾಜರಿರಲಿಲ್ಲ.
ಅಧಿಕಾರಿ ಕ್ಯಾಬಿನೆಟ್ ಮೀಟಿಂಗ್ಗೆ ತೆರಳಿರುವುದಾಗಿ ಸರ್ಕಾರದ ಪರ ವಕೀಲರು ತಿಳಿಸಿದಾಗ, ಅಸಮಾಧಾನ ವ್ಯಕ್ತಪಡಿಸಿದ ಪೀಠ, ಅಧಿಕಾರಿಗಳು ನ್ಯಾಯಾಲಯದ ಆದೇಶದಂತೆ ಕೆಲಸವನ್ನೂ ಮಾಡಿಲ್ಲ. ಇತ್ತ ವಿವರಣೆ ಕೇಳಿದರೆ ಉತ್ತರಿಸಲು ಕೋರ್ಟ್ಗೂ ಬಂದಿಲ್ಲ. ಹಿಂದಿನ ವಿಚಾರಣೆ ವೇಳೆ ಖುದ್ದು ಹಾಜರಿರುವಂತೆ ಸೂಚಿಸಿದರೂ ಅಧಿಕಾರಿ ವಿಚಾರಣೆಗೆ ಹಾಜರಾಗಿಲ್ಲವೆಂದರೆ ಏನರ್ಥ. ಹೀಗೆ ನಡೆದುಕೊಂಡರೆ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿತು.
ಅಲ್ಲದೇ, ವಿಚಾರಣೆಗೆ ಹಾಜರಾಗದಿದ್ದರೆ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಪೊಲೀಸ್ ಮಹಾ ನಿರ್ದೇಶಕರಿಗೆ ಸೂಚಿಸಬೇಕಾಗುತ್ತದೆ ಎಂದಿದೆ.
ಕ್ಷಮೆಯಾಚಿಸಿದ ಅಧಿಕಾರಿ:
ಮಧ್ಯಾಹ್ನದ ವೇಳೆಗೆ ವಿಚಾರಣೆ ಹಾಜರಾದ ಅಧಿಕಾರಿ ನ್ಯಾಯಾಲಯಕ್ಕೆ ಬೇಷರತ್ ಕ್ಷಮೆಯಾಚಿಸಿದರು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಹತ್ತು ದಿನಗಳಲ್ಲಿ ಡಿಮ್ಹಾನ್ಸ್ ಗೆ ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಲಾಗುವುದು. ಹಾಗೆಯೇ ಎಂಆರ್ ಐ ಸಿಟಿ ಸ್ಕ್ಯಾನ್ ಯಂತ್ರವನ್ನು ಮೂರು ತಿಂಗಳಲ್ಲಿ ಅಳವಡಿಸಲಾಗುವುದು ಎಂದರು.
ಇದಕ್ಕೆ ಒಪ್ಪದ ಪೀಠ, ಮೂರು ತಿಂಗಳೇಕೆ. ಅಧಿಕಾರಿಯ ಸಂಬಳ ತಡೆಹಿಡಿದರೆ ಇನ್ನೂ ಬೇಗ ಕೆಲಸ ಆಗುತ್ತದೆ ಎಂದಿತು. ಮತ್ತೆ ವಿವರಣೆ ನೀಡಿದ ಸರ್ಕಾರದ ಪರ ವಕೀಲರು ಎಂಆರ್ ಐ ಸ್ಯಾನಿಂಗ್ ಯಂತ್ರವನ್ನು ಆಮದು ಮಾಡಿಕೊಳ್ಳಬೇಕಿದೆ. ಅದು ಬರಲು ಎರಡು ತಿಂಗಳು ಹಿಡಿಯಲಿದೆ. ಅದನ್ನು ಅಳವಡಿಕೆಗೆ 1 ತಿಂಗಳು ಕಾಲಾವಕಾಶ ಬೇಕು. ಅಷ್ಟು ಸಮಯಾವಕಾಶ ನೀಡಬೇಕು ಎಂದು ಕೋರಿದರು. ಇದಕ್ಕೆ ಸಮ್ಮತಿಸಿದ ಪೀಠ, ಅನುಪಾಲನಾ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.
2020ರ ಮಾರ್ಚ್ 5ರಂದು ಸರ್ಕಾರಕ್ಕೆ ನಿರ್ದೇಶಿಸಿದ್ದ ಹೈಕೋರ್ಟ್, ಮೂರು ತಿಂಗಳಲ್ಲಿ ಡಿಮ್ಹಾನ್ಸ್ ಗೆ ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಬೇಕು. ಎಂಆರ್ ಐ ಸ್ಯಾನಿಂಗ್ ಯಂತ್ರ ಖರೀದಿಸಬೇಕು, ವೈದ್ಯಕೀಯ ಅಧೀಕ್ಷಕರನ್ನು ನೇಮಕ ಮಾಡಬೇಕು ಎಂದಿತ್ತು. ಆದರೆ ಸರ್ಕಾರ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅಕ್ಟೋಬರ್ 5ರಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದ ಪೀಠ, ನ್ಯಾಯಾಲಯದ ಆದೇಶ ಪಾಲಿಸದೇ ಇರುವುದಕ್ಕೆ ಖುದ್ದು ಪ್ರಧಾನ ಕಾರ್ಯದರ್ಶಿ ಹಾಜರಿದ್ದು ವಿವರಣೆ ನೀಡಬೇಕು ಎಂದು ನಿರ್ದೇಶಿಸಿತ್ತು.