ಬೆಂಗಳೂರು:ನಗರದ ಆಟದ ಮೈದಾನ ಮತ್ತು ಉದ್ಯಾನಗಳ ಸಮರ್ಪಕ ನಿರ್ವಹಣೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ(PIL) ಯಲ್ಲಿ ರಾಜ್ಯದ ಎಲ್ಲ ನಗರ ಪಾಲಿಕೆಗಳನ್ನು ಪ್ರತಿವಾದಿಗಳನ್ನಾಗಿ ಸೇರಿಸುವಂತೆ ಹೈಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ. ಬೆಂಗಳೂರಿನಲ್ಲಿರುವ ಪಾರ್ಕ್ ಹಾಗೂ ಆಟದ ಮೈದಾನಗಳ ಸಮರ್ಪಕ ನಿರ್ವಹಣೆ ಕೋರಿ ಹೈಕೋರ್ಟ್ ಕಾನೂನು ಸೇವೆಗಳ ಸಮಿತಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ಮಾಲಿನ್ಯರಹಿತ ಪರಿಸರದಲ್ಲಿ ಜೀವಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಉದ್ಯಾನ ಮತ್ತು ಮೈದಾನ ನಿರ್ವಹಣೆ ಪಾಲಿಕೆಗಳ ಕರ್ತವ್ಯವಾದರೆ ಮಾತ್ರ ಜನರಿಗೆ ಮಾಲಿನ್ಯ ಮುಕ್ತ ಪರಿಸರ, ಶುದ್ಧ ಗಾಳಿ ದೊರೆಯಲಿದೆ. ಆದ್ದರಿಂದ ಅರ್ಜಿಯಲ್ಲಿ ರಾಜ್ಯದ ಎಲ್ಲ ನಗರ ಪಾಲಿಕೆಗಳನ್ನು ಪ್ರತಿವಾದಿಯನ್ನಾಗಿಸಬೇಕು. ಆಗ ಆಟದ ಮೈದಾನ ಮತ್ತು ಉದ್ಯಾನಗಳ ನಿರ್ವಹಣೆ ಅಭಿವೃದ್ಧಿ ಕುರಿತು ಸೂಕ್ತ ನಿರ್ದೇಶನಗಳನ್ನು ನೀಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಹಾಗೆಯೇ, ಈ ನಿಟ್ಟಿನಲ್ಲಿ ಪಿಐಎಲ್ ಅರ್ಜಿಯಲ್ಲಿ ಎಲ್ಲ ನಗರ ಪಾಲಿಕೆಗಳನ್ನು ಪ್ರತಿವಾದಿಯಾಗಿ ಸೇರಿಸಿ ಎಂದು ಅರ್ಜಿದಾರರಿಗೆ ನಿರ್ದೇಶಿಸಿ ವಿಚಾರಣೆ ಮುಂದೂಡಿತು.