ಕರ್ನಾಟಕ

karnataka

ETV Bharat / city

ರಾಕೇಶ್ ಸಿಂಗ್, ಅನಿಲ್ ಕುಮಾರ್​ಗೆ ನ್ಯಾಯಾಂಗ ನಿಂದನೆ ನೋಟಿಸ್ ನೀಡಿದ ಹೈಕೋರ್ಟ್ - High Court give judicial abuse notice to Rakesh Singh

ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿಯ ಹಿಂದಿನ ಆಯುಕ್ತ ಅನಿಲ್ ಕುಮಾರ್‌ ಅವರಿಗೆ ಹೈಕೋರ್ಟ್​ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

High Court
High Court

By

Published : Dec 19, 2020, 2:49 PM IST

ಬೆಂಗಳೂರು: ಬಿಬಿಎಂಪಿಯಲ್ಲಿ ಎರವಲು ಸೇವೆ (ಡೆಪ್ಯೂಟೇಷನ್) ಆಧಾರದಲ್ಲಿ ಅನೇಕ ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ ಆರೋಗ್ಯ ಅಧಿಕಾರಿಗಳು, ಸಹಾಯಕ ಇಂಜಿನಿಯರ್​ಗಳು, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್​ಗಳು, ಕಾರ್ಯನಿರ್ವಾಹಕ ಇಂಜಿನಿಯರ್​ಗಳು, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸದೆ ಇರುವ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.

ಈ ಕುರಿತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಸಲ್ಲಿಸಿದ್ದ ಎರಡು ಪ್ರತ್ಯೇಕ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕ ನೇತೃತ್ವದ ವಿಭಾಗೀಯ ಪೀಠ, ವಿಚಾರಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಇಲಾಖೆ ಹಾಗೂ ಬಿಬಿಎಂಪಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ. ನ್ಯಾಯಾಲಯದ ಆದೇಶ ಪಾಲಿಸದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿಯ ಹಿಂದಿನ ಆಯುಕ್ತ ಅನಿಲ್ ಕುಮಾರ್‌ ಅವರಿಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿದೆ.

ಏನಿದು ಪ್ರಕರಣ?

ಪಾಲಿಕೆಯಲ್ಲಿ ಎರವಲು ಸೇವೆ ಆಧಾರದಲ್ಲಿ ಅಧಿಕಾರಿ ಮತ್ತು ನೌಕರರನ್ನು ನೇಮಿಸಿಕೊಳ್ಳಲು 2011ರ ನ.11ರಂದು ಬಿಬಿಎಂಪಿ ಮಾರ್ಗಸೂಚಿ ರೂಪಿಸಿದೆ. ಅದರಂತೆ ಎರವಲು ಸೇವೆ ಗರಿಷ್ಠ ಅವಧಿಯನ್ನು 3 ವರ್ಷಕ್ಕೆ ನಿಗದಿಪಡಿಸಲಾಗಿದೆ. ಆದರೆ ಕೆಲ ಕಿರಿಯ ಹಾಗೂ ಹಿರಿಯ ಆರೋಗ್ಯ ಅಧಿಕಾರಿಗಳು, ಎಇ, ಎಇಇ, ಇಇ, ಜಂಟಿ ಆಯುಕ್ತರು ಮತ್ತು ಉಪ ಆಯುಕ್ತರು ತಮ್ಮ ರಾಜಕೀಯ ಪ್ರಭಾವ ಬಳಸಿ ಏಳೆಂಟು ವರ್ಷಗಳಿಂದ ಇದೇ ಜಾಗದಲ್ಲಿ ಉಳಿದಿದ್ದಾರೆ. ಇದರಿಂದಾಗಿ ಬಿಬಿಎಂಪಿಯ ಆರೋಗ್ಯ ಅಧಿಕಾರಿಗಳು ಹಾಗೂ ಎಂಜಿನಿಯರ್‌ಗಳ ಸೇವಾ ಹಿರಿತನ ಮತ್ತು ಬಡ್ತಿಗೆ ಅಡ್ಡಿಯಾಗಿದೆ.

ಎರವಲು ಸೇವೆಯಲ್ಲಿರುವ ಅಧಿಕಾರಿಗಳನ್ನು ಮಾತೃ ಇಲಾಖೆಗೆ ವಾಪಸ್ ಕಳಿಸುವಂತೆ 2019 ರ ಮೇ 22 ರಂದು ಸಂಘ ಸಲ್ಲಿಸಿದ್ದ ಮನವಿ ಪತ್ರವನ್ನು ಪಾಲಿಕೆ ಆಯುಕ್ತರು ಪರಿಗಣಿಸಿಲ್ಲ. ಅಲ್ಲದೇ, 2019 ರಲ್ಲಿ ಸಂಘ ಸಲ್ಲಿಸಿದ ಮನವಿ ಪತ್ರ ಪರಿಗಣಿಸುವಂತೆ 2020 ಜ.13 ರಂದು ಹೈಕೋರ್ಟ್ ಏಕ ಸದಸ್ಯ ಪೀಠ ಮತ್ತು ಮಾ.19 ರಂದು ವಿಭಾಗೀಯ ಪೀಠವು ಬಿಬಿಎಂಪಿಗೆ ನಿರ್ದೇಶಿಸಿದೆ. ಈವರೆಗೂ ಅಧಿಕಾರಿಗಳು ನ್ಯಾಯಾಲಯದ ಆದೇಶ ಪಾಲಿಸಿಲ್ಲ. ಆದ್ದರಿಂದ ಪ್ರತಿವಾದಿಗಳಾದ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ರಾಕೇಶ್ ಸಿಂಗ್ ಮತ್ತು ಬಿಬಿಎಂಪಿಯ ಹಿಂದಿನ ಆಯುಕ್ತ ಅನಿಲ್ ಕುಮಾರ್ ಅವರ ವಿರುದ್ಧ ನ್ಯಾಯಂಗ ನಿಂದನೆ ಪ್ರಕರಣದಡಿ ಕ್ರಮ ಜರುಗಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

For All Latest Updates

ABOUT THE AUTHOR

...view details