ಬೆಂಗಳೂರು :ಭೂ ಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಬೈರತಿ ಬಸವರಾಜ್ ಹಾಗೂ ಆರ್.ಶಂಕರ್ ವಿರುದ್ಧದ ಸಲ್ಲಿಸಿರುವ ಖಾಸಗಿ ದೂರಿನ ವಿಚಾರಣೆ ನಡೆಸುತ್ತಿರುವ ನಗರದ 42ನೇ ಎಸಿಎಂಎಂ ಕೋರ್ಟ್ ವಿಚಾರಣಾ ಪ್ರಕ್ರಿಯೆಗೆ ಹೈಕೋರ್ಟ್ ಇಂದು ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶಿಸಿದೆ.
ಪ್ರಕರಣ ಕಾಗ್ನಿಜೆನ್ ತೆಗೆದುಕೊಂಡು ಸಮನ್ಸ್ ಜಾರಿ ಮಾಡಿರುವ 42ನೇ ಎಸಿಎಂಎಂ ಕೋರ್ಟ್ ಆದೇಶ ಹಾಗೂ ಪ್ರಕರಣ ಕುರಿತು ಕೆ.ಆರ್.ಪುರ ಠಾಣೆ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ತಿರಸ್ಕರಿಸಿರುವ 82ನೇ ಸಿಸಿಎಚ್ ನ್ಯಾಯಾಲಯದ ಆದೇಶ ರದ್ದು ಕೋರಿ ಸಚಿವ ಬೈರತಿ ಬಸರವಾಜ್, ಆರ್.ಶಂಕರ್ ಹಾಗೂ ಎ.ಎಂ. ಮಾದಪ್ಪ ಸಲ್ಲಿಸಿರುವ ಅರ್ಜಿಯನ್ನು ಇಂದು ಹೈಕೋರ್ಟ್ ಧಾರವಾಡ ಪೀಠದಲ್ಲಿ ನ್ಯಾ.ಸುನೀಲ್ ದತ್ ಯಾದವ್ ಅವರು ವಿಚಾರಣೆ ನಡೆಸಿದರು.
ಕೆಲ ಕಾಲ ವಾದ ಪ್ರತಿವಾದ ಆಲಿಸಿದ ಪೀಠ, ಅರ್ಜಿದಾರರು ಮತ್ತು ಪ್ರತಿವಾದಿಗಳ ನಡುವೆ ಸಿವಿಲ್ ವ್ಯಾಜ್ಯವಿತ್ತು. 2012ರಲ್ಲಿ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಂದು ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು. ಈ ಕುರಿತು ಸಿವಿಲ್ ನ್ಯಾಯಾಲಯ, ವಿಚಾರಣಾ ನ್ಯಾಯಾಲಯ ಮತ್ತು ಹೈಕೋರ್ಟ್ ಏಕ ಸದಸ್ಯ ಪೀಠ ಹೊರಡಿಸಿರುವ ಆದೇಶವನ್ನು ಪರಿಗಣಿಸಬೇಕಿದೆ.
ಆದ್ದರಿಂದ ಇದು ಮಧ್ಯಂತರ ಆದೇಶ ನೀಡಲು ಇದು ಅರ್ಹ ಪ್ರಕರಣವಾಗಿದೆ ಎಂದು ಅಭಿಪ್ರಾಯಪಟ್ಟು 42ನೇ ಎಸಿಎಂಎಂ ಕೋರ್ಟ್ ನ ವಿಚಾರಣಾ ಪ್ರಕ್ರಿಯೆಗೆ ತಡೆ ನೀಡಿತು. ಅಲ್ಲದೇ, ಪ್ರತಿವಾದಿಗಳಾದ ಕೆ.ಆರ್.ಪುರ ಠಾಣೆ ಪೊಲೀಸರು ಮತ್ತು ಮೂಲ ದೂರುದಾರ ಎ.ಮಾದಪ್ಪ ಅವರಿಗೆ ನೋಟಿಸ್ ಜಾರಿ ಮಾಡಿ, ವಿಚಾರಣೆಯನ್ನು 2022ರ ಜನವರಿಗೆ 2ನೇ ವಾರಕ್ಕೆ ಮುಂದೂಡಿತು.
ಕೆ.ಆರ್ ಪುರ ಬಳಿಯ ಕಲ್ಕೆರೆ ಗ್ರಾಮದಲ್ಲಿರುವ 22.43 ಎಕರೆ ಭೂಮಿ ಅದೂರ್ ಅಣ್ಣೈಯಪ್ಪಗೆ ಎಂಬುವರಿಗೆ ಸೇರಿದ್ದು, ಈ ಭೂಮಿಯನ್ನು ಇವರ ಸಂಬಂಧಿಕರಾದ ಮಾದಪ್ಪ ಹಾಗೂ ಪಿಳ್ಳಮಾದಪ್ಪ ಎಂಬುವರು 2003ರ ಮೇ 21ರಂದು ಖಾಲಿ ಕಾಗದಗಳ ಮೇಲೆ ಅದೂರ್ ಅಣ್ಣೈಯಪ್ಪ ಅವರ ಸಹಿ ಮತ್ತು ಹೆಬ್ಬೆಟ್ಟು ಪಡೆದುಕೊಂಡಿದ್ದಾರೆ. ನಂತರ ಪಾಲುದಾರಿಕೆ ಕರಾರು ಸಿದ್ಧಪಡಿಸಿಕೊಂಡು ಶಾಸಕ ಬೈರತಿ ಬಸವರಾಜ್ ಅವರಿಗೆ ಅದೇ ವರ್ಷ ಅಕ್ರಮವಾಗಿ ಜಮೀನು ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಅಣ್ಣೈಯಪ್ಪ ಪುತ್ರ ಮಾದಪ್ಪ ಖಾಸಗಿ ದೂರು ದಾಖಲಿಸಿದ್ದರು.
ಪ್ರಕರಣದ ಬಗ್ಗೆ ಹಿರಿಯ ವಕೀಲರಾದ ಬಿ,ವಿ. ಆಚಾರ್ಯ ಅವರಿಂದ ಮಾಹಿತಿ ಸಚಿವ ಬೈರತಿ ಬಸವರಾಜ್ ವಿರುದ್ಧದ ಪ್ರಕರಣ : ದೂರಿನ ವಿಚಾರಣೆ ನಡೆಸಿದ್ದ ಎಸಿಎಂಎಂ ಕೋರ್ಟ್ 2018ರ ಡಿ.13ರಂದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೆ.ಆರ್. ಪುರ ಠಾಣೆ ಪೊಲೀಸರಿಗೆ ಆದೇಶಿಸಿತ್ತು. ಅದರಂತೆ ಪೊಲೀಸರು ತನಿಖೆ ನಡೆಸಿ ಬಿ ರಿಪೋರ್ಟ್ ಸಲ್ಲಿಸಿದ್ದರು. ನಂತರ ಪ್ರಕರಣ 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯಕ್ಕೆ (ಜನಪ್ರತಿನಿಧಿಗಳ ನ್ಯಾಯಾಲಯ) ವರ್ಗಾವಣೆಯಾಗಿತ್ತು. ಈ ನ್ಯಾಯಾಲಯವು 2021ರ ಸೆ.9ರಂದು ಬಿ ರಿಪೋರ್ಟ್ ತಿರಸ್ಕರಿಸಿತ್ತು.
ನಂತರ ಪ್ರಕರಣವು 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಈ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ 2021ರ ನ.25ರಂದು ಬೈರತಿ ಬಸವರಾಜ್, ಆರ್.ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಅಲ್ಲದೇ 2021ರ ಡಿ.23ರಂದು ಖುದ್ದು ವಿಚಾರಣೆಗೆ ಹಾಜರಾಗುವಂತೆ ನಿರ್ದೇಶಿಸಿತ್ತು. ಬಿ ರಿಪೋರ್ಟ್ ತಿರಸ್ಕರಿಸಿದ ಮತ್ತು ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ ಸಮನ್ಸ್ ಜಾರಿಗೊಳಿಸಿ ವಿಚಾರಣಾ ನ್ಯಾಯಾಲಯಗಳ ಆದೇಶಗಳ ರದ್ದು ಕೋರಿ ಬಸವರಾಜು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.