ಬೆಂಗಳೂರು: ಕಾರಣಾಂತರಗಳಿಂದ 10 ವರ್ಷದೊಳಗೆ ಕಾನೂನು ಪದವಿ ಪೂರೈಸಲು ವಿಫಲವಾಗಿರುವ ಅಭ್ಯರ್ಥಿಯೊಬ್ಬರಿಗೆ ಅಂತಿಮ ವರ್ಷದ ಪರೀಕ್ಷೆ ಬರೆಯಲು ಅನುಮತಿ ನೀಡುವುದಕ್ಕೆ ಸಂಬಂಧಿಸಿದ ಮನವಿಯನ್ನು ಅನುಕಂಪದ ಆಧಾರದಲ್ಲಿ ಪರಿಗಣಿಸಿ ಸೂಕ್ತ ನಿರ್ಣಯ ಕೈಗೊಳ್ಳುವಂತೆ ಹೈಕೋರ್ಟ್, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಆದೇಶಿಸಿದೆ.
ಈ ಕುರಿತು ಚಿತ್ರದುರ್ಗ ತಾಲೂಕಿನ ಎಸ್‌ಜೆಎಂ ಬಡಾವಣೆ ನಿವಾಸಿ ಎಸ್. ಜನಾರ್ದನ ಪೂಜಾರಿ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಪಿ. ಕೃಷ್ಣ ಭಟ್ ಅವರಿದ್ದ ಏಕ ಸದಸ್ಯ ಪೀಠ ಈ ಆದೇಶ ಹೊರಡಿಸಿದೆ. ಅರ್ಜಿದಾರರು 2009ರಲ್ಲಿ ಚಿತ್ರದುರ್ಗದ ಎಸ್‌ಜೆಎಂ ಕಾನೂನು ಕಾಲೇಜಿನಲ್ಲಿ ಐದು ವರ್ಷದ ಕಾನೂನು ಪದವಿಗೆ ಪ್ರವೇಶ ಪಡೆದಿದ್ದರು. ಐದು ವರ್ಷಗಳ ಕಾನೂನು ಪದವಿಯನ್ನು ಪ್ರವೇಶ ಪಡೆದ ವರ್ಷದಿಂದ 10 ವರ್ಷದೊಳಗೆ ಪೂರ್ಣಗೊಳಿಸಬೇಕು ಎಂಬ ನಿಯಮವಿದೆ.
ಆದರೆ, ನಾನಾ ಕಾರಣಗಳಿಂದ ಕಾನೂನು ಪದವಿ ಪೂರ್ಣಗೊಳಿಸಲು ಅರ್ಜಿದಾರರಿಗೆ ಸಾಧ್ಯವಾಗಿರಲಿಲ್ಲ. ಇದರಿಂದ ಬಾಕಿಯಿರುವ ಅಂತಿಮ ವರ್ಷದ ವಿಷಯಗಳಲ್ಲಿ ಉತ್ತೀರ್ಣವಾಗುವುದಕ್ಕಾಗಿ 2022ರ ಏ.26ರಿಂದ ಆರಂಭವಾಗಿರುವ ಪರೀಕ್ಷೆ ಬರೆಯಲು ತಮಗೆ ಅನುಮತಿ ನೀಡುವಂತೆ ಅರ್ಜಿದಾರರು ಕರ್ನಾಟಕ ಕಾನೂನು ವಿವಿಯನ್ನು ಕೋರಿದ್ದರು. ಆದರೆ, ವಿವಿ ಅನುಮತಿ ನಿರಾಕರಿಸಿದ್ದರಿಂದ ಅರ್ಜಿದಾರರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.