ಕರ್ನಾಟಕ

karnataka

ETV Bharat / city

ಗೋಹತ್ಯೆ ನಿಷೇಧ ಕಾಯ್ದೆ; ಜಾನುವಾರು ಸಾಗಣೆ ನಿಯಮದ ಸ್ಪಷ್ಟನೆಗೆ ಹೈಕೋರ್ಟ್ ಸೂಚನೆ - High Court instructs government to clarify rules about Cow Slaughter act

ಗೋಹತ್ಯೆ ಪ್ರತಿಬಂಧಕ ಸುಗ್ರೀವಾಜ್ಞೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ನಿಯಮಗಳ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.

Cow Slaughter act
Cow Slaughter act

By

Published : Jan 18, 2021, 8:13 PM IST

ಬೆಂಗಳೂರು: ಗೋಹತ್ಯೆ ನಿಷೇಧ ಕಾಯ್ದೆ ಸುಗ್ರೀವಾಜ್ಞೆಯಲ್ಲಿರುವ ಸೆಕ್ಷನ್ 5ನ್ನು ಪಾಲಿಸುವುದು ರೈತರಿಗೆ ಕಷ್ಟವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಈ ನಿಯಮಗಳ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿದೆ.

ಗೋ ಹತ್ಯೆ ಪ್ರತಿಬಂಧಕ ಸುಗ್ರೀವಾಜ್ಞೆ ಪ್ರಶ್ನಿಸಿ ನಗರದ ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ಆರೀಫ್ ಜಮೀಲ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ ಸರ್ಕಾರ ಸಲ್ಲಿಸಿದ್ದ ವಿವರಣೆ ಪರಿಶೀಲಿಸಿದ ಪೀಠ, ಸೆಕ್ಷನ್ 5 ರಡಿ ರೂಪಿಸಿರುವ ನಿಯಮಗಳು ಸೂಕ್ತ ಎನ್ನಿಸುತ್ತಿಲ್ಲ. ಜಾನುವಾರುಗಳನ್ನು ಒಂದೆಡೆಯಿಂದ ಮತ್ತೊಂದೆಡೆ ಸಾಗಿಸಲು ರೈತರು ಜಿಲ್ಲಾ ಪಶುವೈದ್ಯಾಧಿಕಾರಿಯಿಂದ ಪ್ರಮಾಣ ಪತ್ರ ಪಡೆದುಕೊಂಡು, ಜಾನುವಾರುಗಳಿಗೆ ಟ್ಯಾಗ್ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ. ಇಂತಹ ನಿಯಮಗಳನ್ನು ರೈತರು ಪ್ರತಿ ಬಾರಿ ಪಾಲಿಸಲು ಸಾಧ್ಯವಾಗುವುದಿಲ್ಲ. ಇಂತಹ ನಿಯಮಗಳು ರೈತರು ತಮ್ಮ ಜಾನುವಾರುಗಳನ್ನು ಸಾಗಿಸುವುದಕ್ಕೆ ಸಮಸ್ಯೆ ಎದುರಿಸಬೇಕಾಗುತ್ತದೆ. ಹೀಗಾಗಿ ರಾಜ್ಯ ಸರ್ಕಾರ ಈ ನಿಯಮಗಳಿಗ ಸ್ಪಷ್ಟನೆ ನೀಡಬೇಕು ಎಂದು ನಿರ್ದೇಶಿಸಿತು.

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದಿಸಿದ ವಕೀಲ ರಹಮತ್ ಉಲ್ಲಾ ಕೊತ್ವಾಲ್, ಸೆಕ್ಷನ್ 5ರ ಪ್ರಕಾರ ಜಾನುವಾರುಗಳನ್ನು ಸಾಗಿಸುವುದು ಕಷ್ಟದ ಕೆಲಸ. ಪ್ರತಿ ಬಾರಿ ರೈತರು ಜಿಲ್ಲಾ ಪಶುವೈದ್ಯಾಧಿಕಾರಿ ಎದುರು ಹೋಗಿ ನಿಯಮಗಳನ್ನು ಪಾಲಿಸಲು ಅನುಮತಿ ಕೇಳುವುದು ಸರಿ ಕಾಣುವುದಿಲ್ಲ. ಹೀಗಾಗಿ ನಿಯಮಗಳಿಗೆ ತಡೆ ನೀಡಬೇಕು ಎಂದು ಕೋರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಸರ್ಕಾರ ಸೂಕ್ತ ವಿವರಣೆ ನೀಡದಿದ್ದರೆ ಮಧ್ಯಂತರ ಆದೇಶ ನೀಡುವ ಕುರಿತು ಯೋಚಿಸಲಿದೆ ಎಂದು ತಿಳಿಸಿತು. ಸರ್ಕಾರದ ಪರ ವಕೀಲರು ನಿಯಮಗಳಿಗೆ ಸ್ಪಷ್ಟನೆ ನೀಡಲು ಕಾಲಾವಕಾಶ ಕೋರಿದ ಹಿನ್ನೆಲೆಯಲ್ಲಿ ಪೀಠ, ವಿಚಾರಣೆಯನ್ನು ಜನವರಿ 20ಕ್ಕೆ ಮುಂದೂಡಿತು.

ABOUT THE AUTHOR

...view details