ಬೆಂಗಳೂರು:ಬಳ್ಳಾರಿ ನಗರದ ಕೌಲ್ ಬಜಾರ್ ಸಮೀಪದ ಶಾಲೆ ಪಕ್ಕದಲ್ಲಿಯೇ ಮೀನು ಮಾರುಕಟ್ಟೆ ನಿರ್ಮಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಈ ಸಂಬಂಧ ಜಿಲ್ಲಾಧಿಕಾರಿ ಹಾಗೂ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನಿರ್ದೇಶಿಸಿದೆ.
ಶಾಲೆ ಪಕ್ಕದಲ್ಲಿಯೇ ಮೀನು ಮಾರುಕಟ್ಟೆ ನಿರ್ಮಾಣ ಪ್ರಶ್ನಿಸಿ ಕೌಲ್ ಬಜಾರ್‌ನ ಮಹೇಜಬೀನ್ ಸೇರಿ 23 ನಿವಾಸಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಬಳ್ಳಾರಿ ಜಿಲ್ಲಾಧಿಕಾರಿ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಅರ್ಜಿದಾರರ ಜೊತೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಬೇಕು. ಮಾರುಕಟ್ಟೆ ನಿರ್ಮಾಣದಿಂದ ಸಾರ್ವಜನಿಕರಿಗೆ ಅನಾನುಕೂಲ ಉಂಟಾಗಲಿದೆಯೇ?, ಸ್ಥಳದಲ್ಲಿ ನೈರ್ಮಲ್ಯದ ಸಮಸ್ಯೆ ಎದುರಾಗಲಿದೆಯೇ? ಎಂಬುದನ್ನು ಪರಿಶೀಲಿಸಿ ಡಿಸಿ ಹಾಗೂ ಕೆಎಸ್‌ಪಿಸಿಬಿ ಅಧಿಕಾರಿಗಳು ಪ್ರತ್ಯೇಕವಾಗಿ ವರದಿ ಸಿದ್ಧಪಡಿಸಬೇಕು. ಈ ವರದಿಗಳನ್ನು ಜನವರಿ 20ರ ಒಳಗೆ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಸೂಚಿಸಿ ವಿಚಾರಣೆಯನ್ನು ಫೆ.1ಕ್ಕೆ ಮುಂದೂಡಿದೆ.