ಬೆಂಗಳೂರು: ಉಡುಪಿಯ ಶಿರೂರು ಮಠಕ್ಕೆ ಅಪ್ರಾಪ್ತನನ್ನು ಪೀಠಾಧಿಪತಿಯಾಗಿ ನೇಮಕ ಮಾಡಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಪೂರ್ಣಗೊಳಿಸಿರುವ ಹೈಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ.
ಈ ಕುರಿತು ಶಿರೂರು ಮಠದ ಭಕ್ತರಾದ ಲಾತವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಅರ್ಜಿಯನ್ನು ಹಂಗಾಮಿ ಸಿಜೆ ಎಸ್.ಸಿ ಶರ್ಮಾ ನೇತೃತ್ವದ ವಿಭಾಗೀಯ ಶುಕ್ರವಾರ ವಿಚಾರಣೆ ನಡೆಸಿತು. ಅರ್ಜಿದಾರರು ಹಾಗೂ ಪ್ರತಿವಾದಿಗಳಿಂದ ನಾಲ್ಕು ತಾಸಿಗೂ ಹೆಚ್ಚು ಕಾಲ ವಾದ ಆಲಿಸಿದ ಪೀಠ, ತೀರ್ಪು ಕಾಯ್ದಿರಿಸಿತು.
ಅರ್ಜಿದಾರರ ಪರ ವಕೀಲ ಡಿ.ಆರ್.ರವಿಶಂಕರ್ ವಾದಿಸಿ, ಅಷ್ಟಮಠಗಳಿಗೆ ಪ್ರತ್ಯೇಕ ಭಕ್ತಪರಂಪರೆ ಇದ್ದರೂ ವಾದಿರಾಜ ಮಠ ಶಿರೂರು ಮಠಕ್ಕೆ ಪೀಠಾಧಿಪತಿ ನೇಮಿಸಿದೆ. ಇನ್ನು ಅಪ್ರಾಪ್ತರ ಮೇಲೆ ವೈರಾಗ್ಯ ಹೇರುವುದಾಗಲಿ, ಪೀಠಾಧಿಪತಿ ಹೊಣೆ ಹೊರಿಸುವುದಾಗಲಿ ಮಾಡಬಾರದು. ಅಪ್ರಾಪ್ತರು ಆಸ್ತಿ ಹೊಣೆಗಾರಿಕೆ ನಿಭಾಯಿಸುವಂತಿಲ್ಲ. ಆದ್ದರಿಂದ, ಅಪ್ರಾಪ್ತರನ್ನು ಶಿರೂರು ಮಠದ ಪೀಠಾಧಿಪತಿಯಾಗಿ ನೇಮಕ ಮಾಡಿರುವುದು ಕಾನೂನು ಬಾಹಿರ ಕ್ರಮ ಎಂದರು.
ಸೋದೆ ವಾದಿರಾಜ ಮಠದ ಪರ ವಕೀಲರು ವಾದಿಸಿ, ಉಡುಪಿಯ ಅಷ್ಟ ಮಠಗಳಲ್ಲಿ ಯಾವುದೇ ಒಂದು ಮಠದ ಪೀಠಾಧಿಪತಿ ಮೃತಪಟ್ಟಾಗ ಅದಕ್ಕೆ ಉತ್ತರಾಧಿಕಾರಿಯನ್ನು ಮತ್ತೊಂದು ಮಠದ ಪೀಠಾಧಿಪತಿ ನೇಮಕ ಮಾಡುತ್ತಾರೆ. ಇನ್ನು ಅರ್ಜಿದಾರರೆಲ್ಲರೂ ಮಠದ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ 2020ರ ಡಿಸೆಂಬರ್‌ನಲ್ಲಿ ಟ್ರಸ್ಟ್ ರಚಿಸಿಕೊಂಡಿದ್ದಾರೆ. ಮೊದಲ ಅರ್ಜಿದಾರ ಲಾತವ್ಯ ಆಚಾರ್ಯ ಅವರ ಮಗನನ್ನು ಮಠದ ಪೀಠಾಧಿಪತಿಯಾಗಿ ಮಾಡಬೇಕೆಂದು ನಿರ್ಧರಿಸಿ, ಆಗದಿದ್ದಾಗ ಪಿಐಎಲ್ ಸಲ್ಲಿಸಿದ್ದಾರೆ ಎಂದು ಆರೋಪಿಸಿದರು.
ಅಮಿಕಸ್ ಕ್ಯೂರಿ ಎಸ್.ಎಸ್.ನಾಗಾನಂದ ವಾದಿಸಿ, ಸಂವಿಧಾನದ ವಿಧಿ 26ರಲ್ಲಿ ಧಾರ್ಮಿಕ ಸ್ವಾತಂತ್ರ್ಯಗಳನ್ನು ನೀಡಲಾಗಿದೆ. ಇದರಲ್ಲಿ ಯಾರೂ ಹಸ್ತಕ್ಷೇಪ ಮಾಡುವಂತಿಲ್ಲ. ಮಠಕ್ಕೆ ಶಾಸ್ತ್ರ ಸಂಪ್ರದಾಯಗಳ ಪ್ರಕಾರವೇ ಪೀಠಾಧಿಪತಿ ನೇಮಕ ಮಾಡಲಾಗಿದೆ. ಅಪ್ರಾಪ್ತ ಎಂಬ ಕಾರಣ ಮುಂದಿಟ್ಟಿದ್ದರೂ, ಧಾರ್ಮಿಕ ವಿಷಯಗಳಿಗೆ ಬಂದಾಗ 14 ವರ್ಷ ವಯಸ್ಸನ್ನು ಪರಿಗಣಿಸಲಾಗುತ್ತದೆ. ಶಾಸ್ತ್ರಗಳ ಪ್ರಕಾರ 14 ವಯಸ್ಸು ದಾಟಿದವರು ವಿರಕ್ತಿ ನಿರ್ಧಾರ ಕೈಗೊಳ್ಳಬಹುದು. ಬೌದ್ಧರಲ್ಲಿ ಚಿಕ್ಕ ಮಕ್ಕಳಿಗೇ ಸನ್ಯಾಸ ನೀಡಲಾಗುತ್ತದೆ. ಈ ಪ್ರಕರಣದಲ್ಲಿ ಮಠಾಧಿಪತಿಗೆ 17 ವರ್ಷವಾಗಿದ್ದು, ಆಸಕ್ತಿಯಿಂದಲೇ ಸನ್ಯಾಸ ದೀಕ್ಷೆ ಪಡೆದಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ:ಮಂಡ್ಯ: ಧಾರ್ಮಿಕ ಚಟುವಟಿಕೆಗೆ ಸರ್ಕಾರಿ ಶಾಲೆ ಆಕ್ರಮಿಸಿಕೊಂಡ ಧಾರ್ಮಿಕ ಗುರು?