ಬೆಂಗಳೂರು:ಅಪ್ಪನ ಆಸ್ತಿ ಹಂಚಿಕೆ ಮಾಡಿಕೊಳ್ಳುವ ವಿಚಾರವಾಗಿ ಕೋರ್ಟ್ ಮೆಟ್ಟಿಲೇರಿದ್ದ ಅಣ್ಣ-ತಂಗಿಗೆ ಹೈಕೋರ್ಟ್ ಬುದ್ಧಿ ಮಾತು ಹೇಳಿದೆ. ಅಲೆಕ್ಸಾಂಡರನ ಸಾಮ್ರಾಜ್ಯವೇ ಉಳಿಯಲಿಲ್ಲ ಎಂದಾಗ ಸಾವಿನ ಹಾದಿಯಲ್ಲಿ ಸದಾ ದಾಪುಗಾಲಿಕ್ಕುವ ನಾವುಗಳು ಅದರಲ್ಲೂ, ಒಡಹುಟ್ಟಿದ ಅಣ್ಣ–ತಂಗಿಯರು ಆಸ್ತಿಗಾಗಿ ಇಳಿವಯಸ್ಸಿನಲ್ಲಿರುವ ತಂದೆ–ತಾಯಿಗಳ ಮನಸ್ಸನ್ನು ನೋಯಿಸುವುದು ಸರಿಯೇ ಎಂದು ಕೋರ್ಟ್ ಪ್ರಶ್ನಿಸಿದೆ.
ತಂದೆಯ ಆಸ್ತಿ ಹಂಚಿಕೆ ಪ್ರಕರಣದಲ್ಲಿ ಕೋರ್ಟ್‌ಗೆ ಖುದ್ದು ಹಾಜರಾಗಿದ್ದ ಅಣ್ಣ–ತಂಗಿ ಹಾಗೂ ವೃದ್ಧ ತಂದೆ–ತಾಯಿಗಳ ಅಹವಾಲನ್ನು ತಾಳ್ಮೆಯಿಂದ ಆಲಿಸಿದ ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠ, ಕೋರ್ಟ್‌ನಿಂದ ಹೊರಗೆ ಹೋಗುವಾಗ ಯಾವುದಾದರೂ ಮರದ ಟೊಂಗೆ ನಮ್ಮ ಮೇಲೆ ಬಿದ್ದರೆ ಕಥೆ ಮುಗಿಯಿತು. ಹೊರಗೆ ಬಂದವರು ಸುರಕ್ಷಿತವಾಗಿ ಮರಳಿ ಮನೆ ಸೇರುತ್ತೇವೆ ಎಂಬುದೇ ಖಾತ್ರಿ ಇಲ್ಲದಿರುವಾಗ ಆಸ್ತಿ ಹಂಚಿಕೆಗಾಗಿ ಹೆತ್ತ ತಂದೆ–ತಾಯಿಯನ್ನು ಅದೂ ಅವರ ಜೀವನದ ಸಂಧ್ಯಾಕಾಲದಲ್ಲಿ ಯಾಕೆ ನೋಯಿಸುತ್ತೀರಿ’ ಎಂದು ಪ್ರಶ್ನಿಸಿತು.
ಬೆಂಗಳೂರಿನ ಶ್ರೀಮಂತ ಕುಟುಂಬವೊಂದರ ಆಸ್ತಿ ಹಂಚಿಕೆ ವಿವಾದವನ್ನು ನಿನ್ನೆ ವಿಚಾರಣೆ ನಡೆಸಿದ ಪೀಠ, ಮಗ ಎಷ್ಟೇ ಆಗಲಿ ಮಗ. ಅವನ ಉದ್ಧಟತನ, ಒರಟುತನಗಳನ್ನು ನಾವು ಕ್ಷಮಿಸಬೇಕು. ಮಗನೂ ತನ್ನ ತಂದೆ-ತಾಯಿಯ ಯೋಗ ಕ್ಷೇಮವನ್ನು ಹೊರಬೇಕು. ಮಗಳ ಮನೆಯಲ್ಲಿ ಅಳಿಯನೊಟ್ಟಿಗೆ ಇರಬೇಕು ಎಂದರೆ ಹೆತ್ತ ತಂದೆ–ತಾಯಿಗೆ ಎಷ್ಟೊಂದು ಮುಜುಗುರವಾಗಬೇಡ ಎಂದು ಅರ್ಜಿದಾರರನ್ನು ಪ್ರಶ್ನಿಸಿತು.