ಕರ್ನಾಟಕ

karnataka

ETV Bharat / city

ತರಾಟೆ ಬಳಿಕ ಆ್ಯಂಬುಲೆನ್ಸ್ ಟೆಂಡರ್ ರದ್ದು ಆದೇಶ ಹಿಂಪಡೆದ ಸರ್ಕಾರ: ಪ್ರಮಾಣಪತ್ರ ಕೇಳಿದ ಹೈಕೋರ್ಟ್‌ - High Court heard the ambulance tender cancellation order for the government

ಟ್ರಾಫಿಕ್ ಸಮಸ್ಯೆ ನಡುವೆಯೂ ರೋಗಿ ಅಥವಾ ಗಾಯಾಳುವಿನ ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಕ್ತ ಆ್ಯಂಬುಲೆನ್ಸ್ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

High Court
ಹೈಕೋರ್ಟ್‌

By

Published : Jul 30, 2021, 2:03 PM IST

ಬೆಂಗಳೂರು:ನ್ಯಾಯಾಲಯ ಹಲವು ಬಾರಿ ತರಾಟೆಗೆ ತೆಗೆದುಕೊಂಡ ಬಳಿಕ ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆಯ ಟೆಂಡರ್ ರದ್ದುಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆದಿರುವ ರಾಜ್ಯ ಸರ್ಕಾರ, ಹೊಸ ಟೆಂಡರ್ ಪ್ರಕ್ರಿಯೆ ಆರಂಭಿಸಲು ಅನುಮತಿ ಕೋರಿ ಹೈಕೋರ್ಟ್​ಗೆ ಮನವಿ ಮಾಡಿದೆ.

ಟ್ರಾಫಿಕ್ ಸಮಸ್ಯೆ ನಡುವೆಯೂ ರೋಗಿ ಅಥವಾ ಗಾಯಾಳುವಿನ ಗೋಲ್ಡನ್ ಅವರ್ ನಲ್ಲಿ ಆಸ್ಪತ್ರೆಗೆ ದಾಖಲಿಸಲು ಸೂಕ್ತ ಆ್ಯಂಬುಲೆನ್ಸ್ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ತಾಂತ್ರಿಕ ಸಮಿತಿಯ ಸಲಹೆಯಂತೆ 2020ರ ಡಿಸೆಂಬರ್ 17ರಂದು ಟೆಂಡರ್ ರದ್ದುಗೊಳಿಸಿ ಹೊರಡಿಸಿದ್ದ ಆದೇಶವನ್ನು ಹಿಂಪಡೆಯಲಾಗಿದೆ. ಆರೋಗ್ಯ ಸಚಿವರು ಈ ಕುರಿತು ಆದೇಶ ಹೊರಡಿಸಿದ್ದಾರೆ ಎಂದು ಮಾಹಿತಿ ನೀಡಿದರು.

ಇನ್ಮುಂದೆ ಹೀಗಾಗುವುದಿಲ್ಲ

ಅಲ್ಲದೇ, ಯೋಜನೆ ಜಾರಿಗೆ ಹೊಸ ಟೆಂಡರ್ ಪ್ರಕ್ರಿಯೆ ನಡೆಸಲು ಸರ್ಕಾರ ಉದ್ದೇಶಿಸಿದ್ದು, ಅದಕ್ಕೆ ನ್ಯಾಯಾಲಯ ಅನುಮತಿ ನೀಡಬೇಕು. ಹಿಂದಿನ ಟೆಂಡರ್ ನಲ್ಲಿ ಪ್ರಸ್ತಾಪಿಸಿದ್ದ ಅಂಶಗಳನ್ನು ಪರಿಷ್ಕರಿಸಿ, ಹೊಸದಾಗಿ ಇನ್ನಷ್ಟು ಅಂಶಗಳನ್ನು ಸೇರ್ಪಡೆ ಮಾಡಿ ಟೆಂಡರ್ ಕರೆಯಲಾಗುವುದು. ಸರ್ಕಾರಕ್ಕೆ ತನ್ನ ಹಿಂದಿನ ತಪ್ಪುಗಳ ಅರಿವಾಗಿದೆ, ಇನ್ನು ನ್ಯಾಯಾಲಯದ ನಿರ್ದೇಶನದಂತೆಯೇ ಟೆಂಡರ್ ಪ್ರಕ್ರಿಯೆ ನಡೆಸಲಾಗುವುದು ಎಂದರು.

ಸರ್ಕಾರದ ಮನವಿಗೆ ಅರ್ಜಿದಾರರ ಆಕ್ಷೇಪ

ಇದಕ್ಕೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ, ಟೆಂಡರ್ ಪ್ರಕ್ರಿಯೆ 7 ತಿಂಗಳು ವಿಳಂಬವಾಗಿದ್ದು, ಹೊಸ ಟೆಂಡರ್ ಪ್ರಕ್ರಿಯೆ ಕಾಲಮಿತಿಯಲ್ಲಿ ಪೂರ್ಣಗೊಳ್ಳಬೇಕಾಗುತ್ತದೆ, ಇಲ್ಲದಿದ್ದರೆ ಮತ್ತೆ ವಿಳಂಬವಾಗಿ ಜನರಿಗೆ ಸಮಸ್ಯೆಯಾಗುತ್ತದೆ. ಹೀಗಾಗಿ, ಹೊಸ ಟೆಂಡರ್ ಪ್ರಕ್ರಿಯೆಯನ್ನು ಎಷ್ಟು ಕಾಲಮಿತಿಯಲ್ಲಿ ಪೂರ್ಣಗೊಳಿಸುತ್ತಾರೆ ಎಂಬ ಬಗ್ಗೆ ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ಪೀಠಕ್ಕೆ ಮುಚ್ಚಳಿಕೆ ಕೊಡಬೇಕು ಎಂದರು.

ವಿಚಾರಣೆ ಮುಂದೂಡಿದ ಪೀಠ

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ನಿಜ, ಟೆಂಡರ್ ವಿಳಂಬ ಆಗಿದ್ದರಿಂದಲೇ ಜನ ಕೋವಿಡ್ ಸಂದರ್ಭದಲ್ಲಿ ಆ್ಯಂಬುಲೆನ್ಸ್ ಗಳಿಗೆ ಪರದಾಡುವಂತಾಗಿತ್ತು. ಹೀಗಾಗಿ, ಟೆಂಡರ್ ಉದ್ದೇಶ, ವಿವರ, ಹಾಗೂ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತು ಕಾಲಮಿತಿ ನಿಗದಿಪಡಿಸಬೇಕು. ಕೋರ್ಟ್ ಅನುಮತಿ ಇಲ್ಲದೇ ಟೆಂಡರ್ ರದ್ದುಗೊಳಿಸುವುದಿಲ್ಲ ಎಂದು ಮುಚ್ಚಳಿಕೆ ನೀಡಬೇಕು. ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಕುರಿತು ಪ್ರಮಾಣಪತ್ರ ಸಲ್ಲಿಸಬೇಕು ಎಂದು ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿತು.

ಈ ಹಿಂದೆ ಆ್ಯಂಬುಲೆನ್ಸ್ ಟೆಂಡರ್ ವಿಚಾರ ನ್ಯಾಯಾಲಯದಲ್ಲಿ ಬಾಕಿ ಇರುವಾಗಲೇ ಕೋರ್ಟ್ ಗಮನಕ್ಕೆ ತರದೆ ಸರ್ಕಾರ ಟೆಂಡರ್ ರದ್ದು ಮಾಡಿತ್ತು. ಇದು ಹೈಕೋರ್ಟ್ ಆಕ್ರೋಶಕ್ಕೆ ಕಾರಣವಾಗಿತ್ತು. ದಾಖಲೆಗಳಲ್ಲೂ ಸೂಕ್ತ ಮಾಹಿತಿ ನೀಡದ ಹಿನ್ನೆಲೆಯಲ್ಲಿ ಪೀಠ ಆರೋಗ್ಯ ಸಚಿವರಿಗೂ ಹಾಗೂ ಸರ್ಕಾರಕ್ಕೂ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.

ಇದನ್ನೂ:ಮೃತ ಅಭಿಮಾನಿ ರವಿ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರದ ಚೆಕ್​ ವಿತರಿಸಿದ ಬಿಎಸ್​​ವೈ

ABOUT THE AUTHOR

...view details