ಬೆಂಗಳೂರು: ನಗರದ ಮೈಸೂರು ಸ್ಯಾಂಡಲ್ ಫ್ಯಾಕ್ಟರಿ ಬಳಿಯ ವೃತ್ತ ಹಾಗೂ ಪಾರ್ಕ್ ಜಾಗದಲ್ಲಿ ಅನಧಿಕೃತವಾಗಿ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ಟ್ರಾಫಿಕ್ ಪೊಲೀಸರು ಸ್ಥಳ ಪರಿಶೀಲಿಸಿ ವರದಿ ನೀಡುವಂತೆ ಹೈಕೋರ್ಟ್ ಸೂಚಿಸಿದೆ.
ರಸ್ತೆ ಮತ್ತು ಪಾರ್ಕ್ ಜಾಗದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಲಾಗುತ್ತಿದೆ ಎಂದು ಆರೋಪಿಸಿ ನಗರದ ವಕೀಲ ಎ.ವಿ. ಅಮರನಾಥನ್ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರ ವಕೀಲ ಎ.ವಿ. ಅಮರನಾಥನ್ ಅವರು ವಾದಿಸಿ, ರಸ್ತೆಯ ಮಧ್ಯದಲ್ಲಿ ಪ್ರತಿಮೆಗಳನ್ನು ಸ್ಥಾಪಿಸಲು ಮುಂದಾಗಿರುವುದು ಸರಿಯಲ್ಲ. ತುಮಕೂರು, ಮಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಸಾವಿರಾರು ವಾಹನಗಳು ಈ ಮಾರ್ಗದ ಮೂಲಕವೇ ಸಂಚರಿಸುತ್ತವೆ. ಪ್ರತಿಮೆಗಳಿಂದಾಗಿ ಸಂಚಾರಕ್ಕೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.
ಹೇಳಿಕೆ ದಾಖಲಿಸಿಕೊಂಡ ಪೀಠ, ಈ ಕುರಿತು ಸಂಬಂಧಿತ ಟ್ರಾಫಿಕ್ ಪೊಲೀಸ್ ಅಧಿಕಾರಿ ಸ್ಥಳ ಪರಿಶೀಲಿಸಿ. ಪ್ರತಿಮೆಗಳು ಸಂಚಾರ ದಟ್ಟಣೆಗೆ ಕಾರಣವಾಗುತ್ತಿವೆಯೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟಂಬರ್ 23ಕ್ಕೆ ಮುಂದೂಡಿತು. ಹಿಂದಿನ ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು ಪ್ರತಿಮೆಗಳು ರಸ್ತೆಯಲ್ಲಿ ಅಥವಾ ಪಾರ್ಕ್ ಜಾಗದಲ್ಲಿ ಇಲ್ಲವೆಂದು ಸ್ಪಷ್ಟನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಇಂದು ನಡೆದ ವಿಚಾರಣೆ ವೇಳೆ ಪ್ರತಿಮೆಗಳು ಸಂಚಾರಕ್ಕೆ ಅಡ್ಡಿಯಾಗುತ್ತಿವೆ ಎಂದು ಆರೋಪಿಸಿದ್ದರಿಂದ ಕೋರ್ಟ್ ಈ ನಿರ್ದೇಶನ ನೀಡಿತು.
ಪ್ರಕರಣದ ಹಿನ್ನೆಲೆ:ನಗರದ ಮೈಸೂರು ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಸಮೀಪದ ಜಂಕ್ಷನ್ ನಲ್ಲಿ ಜಗಜ್ಯೋತಿ ಬಸವೇಶ್ವರ, ಡಾ. ಶಿವಕುಮಾರ ಸ್ವಾಮೀಜಿ ಹಾಗೂ ಡಾ. ರಾಜ್ ಕುಮಾರ್ ಅವರ ಪ್ರತಿಮೆಗಳನ್ನು ಸ್ಥಾಪಿಸಲಾಗಿದೆ. ಈ ಪ್ರತಿಮೆಗಳು ಪಾರ್ಕ್ ಗೆ ಸೇರಿದ ಜಾಗ ಹಾಗೂ ಹೆದ್ದಾರಿಯ ಜಾಗದಲ್ಲಿವೆ. ಸಾರ್ವಜನಿಕರು ಮತ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗಿರುವ ಈ ಪ್ರತಿಮೆಗಳನ್ನು ತೆರವು ಮಾಡಲು ಬಿಬಿಎಂಪಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.