ಕರ್ನಾಟಕ

karnataka

ETV Bharat / city

ಶಿಕ್ಷೆಗೆ ಗುರಿಯಾಗದಿದ್ದರೂ ಅಪರಾಧದಲ್ಲಿ ತೊಡಗಿದವರ ವಿರುದ್ಧ ರೌಡಿಶೀಟರ್ ತೆಗೆಯಬಹುದು : ಹೈಕೋರ್ಟ್ - ರೌಡಿ ಶೀಟ್ ತೆಗೆಯಲು ಹೈಕೋರ್ಟ್ ಮಾರ್ಗಸೂಚಿಗಳು

ರೌಡಿಯಾಗಿದ್ದವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ತಳ್ಳು ಹಾಕುವಂತಿಲ್ಲ. ಮುಖ್ಯವಾಗಿ ರೌಡಿಶೀಟ್ ಆರಂಭಿಸುವುದೇ ರೌಡಿಗಳ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು. ಆದ್ದರಿಂದ ಇದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ..

High Court Guidelines on Rules for Rowdy Sheet Removal, High Court Guidelines on Rowdy Sheet removal, Karnataka high court news, ರೌಡಿಶೀಟರ್ ತೆಗೆಯುವಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ, ರೌಡಿ ಶೀಟ್ ತೆಗೆಯಲು ಹೈಕೋರ್ಟ್ ಮಾರ್ಗಸೂಚಿಗಳು, ಕರ್ನಾಟಕ ಹೈಕೋರ್ಟ್ ಸುದ್ದಿ,
ಹೈಕೋರ್ಟ್

By

Published : Apr 23, 2022, 7:50 AM IST

ಬೆಂಗಳೂರು : ಅಪರಾಧ ಚುಟವಟಿಕೆಗಳಲ್ಲಿ ಸಕ್ರಿಯಾಗಿರುವ ರೌಡಿಗಳ ವಿರುದ್ಧ ರೌಡಿಶೀಟರ್ ತೆಗೆಯುವ ವಿಚಾರದಲ್ಲಿ ಅನುಸರಿಸಬೇಕಾದ ನಿಯಮಗಳ ಕುರಿತು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ. ಅಪರಾಧ ಪ್ರಕರಣದಲ್ಲಿ ಶಿಕ್ಷೆಯಾಗದಿದ್ದರೂ ಪೊಲೀಸರು ವಿರುದ್ಧ ರೌಡಿಶೀಟರ್ ತೆಗೆಯುವ ಮೂಲಕ ನಮ್ಮ ಹಕ್ಕುಗಳನ್ನು ಉಲ್ಲಂಘಿಸಿದ್ದಾರೆ. ಆದ್ದರಿಂದ ನಮ್ಮ ವಿರುದ್ದ ತೆರೆದಿರುವ ರೌಡಿಶೀಟ್ ರದ್ದುಪಡಿಸಬೇಕು ಎಂದು ಕೋರಿ ಬಿ.ಎಸ್ ಪ್ರಕಾಶ ಹಾಗೂ ರಾಕೇಶ್ ಮಲ್ಲಿ ಸೇರಿದಂತೆ ಒಟ್ಟು 19 ಮಂದಿ ರೌಡಿಶೀಟರ್‌ಗಳು ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿಗಳನ್ನು ವಿಚಾರಣೆ ನಡೆಸಿದ ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ, ಒಬ್ಬ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲಾಗದಿದ್ದರೂ ಮತ್ತು ನ್ಯಾಯಾಲಯದಿಂದ ಯಾವುದೇ ಶಿಕ್ಷೆಗೆ ಗುರಿಯಾಗದ ಸಂದರ್ಭದಲ್ಲೂ ಅವರ ವಿರುದ್ಧ ರೌಡಿಶೀಟ್ ತೆಗೆಯಬಹುದು. ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಅಪರಾಧ ಪ್ರಕರಣಗಳಿಂದ ಖುಲಾಸೆಯಾಗಿರುವ ಮಾತ್ರಕ್ಕೆ ಅಂತಹ ವ್ಯಕ್ತಿಯನ್ನು ರೌಡಿ ಪಟ್ಟಿಯಿಂದ ಕೈಬಿಡಬೇಕು ಎನ್ನುವುದು ಸರಿಯಲ್ಲ.

ರೌಡಿಯಾಗಿದ್ದವರು ಮುಂದೆಯೂ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗುವ ಸಾಧ್ಯತೆಯನ್ನು ತಳ್ಳು ಹಾಕುವಂತಿಲ್ಲ. ಮುಖ್ಯವಾಗಿ ರೌಡಿಶೀಟ್ ಆರಂಭಿಸುವುದೇ ರೌಡಿಗಳ ಅಪರಾಧ ಕೃತ್ಯಗಳ ಮೇಲೆ ನಿಗಾ ಇಡಲು. ಆದ್ದರಿಂದ ಇದು ನ್ಯಾಯಸಮ್ಮತವಾದ ನಿರ್ಬಂಧವಾಗಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಓದಿ:ಪಿಎಸ್ಐ ನೇಮಕಾತಿ ಅಕ್ರಮ: 8 ಆರೋಪಿಗಳ ಜಾಮೀನು ಅರ್ಜಿ ವಜಾ

ರೌಡಿಶೀಟ್ ತೆಗೆಯುವ ಮುನ್ನ ಅನುಸರಿಸಬೇಕಾದ ನಿಯಮಗಳ ಕುರಿತು ಮಾರ್ಗಸೂಚಿ ರೂಪಿಸಿರುವ ಹೈಕೋರ್ಟ್, ರೌಡಿಶೀಟ್ ತೆಗೆಯುವ ಮತ್ತು ರೌಡಿಪಟ್ಟಿಯಿಂದ ಹೆಸರು ಕೈಬಿಡುವ ವಿಚಾರಗಳ ಬಗ್ಗೆ ಶಾಸಕಾಂಗ ವಿಸ್ತೃತ ಕಾನೂನು ರಚಿಸಬೇಕು. ವಿಸ್ತೃತ ಕಾನೂನು ರೂಪಿಸುವವರೆಗೆ ಈ ಮಾರ್ಗಸೂಚಿಗಳನ್ನು ಪೊಲೀಸ್ ಇಲಾಖೆ ಪಾಲಿಸಬೇಕು. ಹಾಗೆಯೇ, ನಾಗರಿಕ ಸಮಾಜದಲ್ಲಿ ರೌಡಿ ಚಟುವಟಿಕೆಗಳಿಗೆ ಅವಕಾಶವಿರಬಾರದು. ಅದನ್ನು ನಿಯಂತ್ರಿಸಲು ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಪೀಠ ನಿರ್ದೇಶಿಸಿದೆ.

ಹೈಕೋರ್ಟ್ ಮಾರ್ಗಸೂಚಿಗಳು :ಅಪರಾಧ ಪ್ರಕರಣದಿಂದ ಖುಲಾಸೆಯಾದರೂ ಗುಪ್ತಚರ ವರದಿ ಹಾಗೂ ನಿಖರ ಮಾಹಿತಿ ಹೊಂದಿದ್ದರೆ ರೌಡಿ ಶೀಟ್ ತೆರೆಯಬಹುದು. ಒಬ್ಬ ವ್ಯಕ್ತಿ ವಿರುದ್ಧ ರೌಡಿಶೀಟ್ ತೆಗೆಯಬೇಕಾದರೆ ಆ ವ್ಯಕ್ತಿಗೆ ಮುಂಚಿತವಾಗಿ ನೋಟಿಸ್ ನೀಡಿ ಮಾಹಿತಿ ನೀಡಬೇಕು. ರೌಡಿಶೀಟ್ ಹಾಕದಂತೆ ಮನವಿ ಸಲ್ಲಿಸಲು ಅವಕಾಶ ನೀಡಬೇಕು. ರೌಡಿಶೀಟ್ ಹಾಕುವಾಗ ಸಕಾರಣ ನೀಡಿ ಲಿಖಿತ ಆದೇಶ ನೀಡಬೇಕು ಎಂದು ಹೈಕೋರ್ಟ್​ ಹೇಳಿದೆ.

ಜಿಲ್ಲೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿ ಮತ್ತು ನಗರದಲ್ಲಿ ಸಹಾಯಕ ಪೊಲೀಸ್ ಆಯುಕ್ತರು ರೌಡಿಶೀಟ್ ತೆಗೆಯಲು ಲಿಖಿತ ಆದೇಶ ಹೊರಡಿಸಬೇಕು. ಎರಡು ವರ್ಷಕ್ಕೊಮ್ಮೆ ರೌಡಿಶೀಟ್ ಅನ್ನು ಮರು ಪರಿಶೀಲನೆ ನಡಸಿ ಸಮಗ್ರವಾದ ಲಿಖಿತ ಆದೇಶ ಹೊರಡಿಸಬೇಕು. ರೌಡಿಶೀಟ್ ತೆರೆದ ನಂತರ ಆ ಬಗ್ಗೆ ಯಾವುದೇ ತಕರಾರು ಇದ್ದರೆ ಬಾದಿತ ವ್ಯಕ್ತಿ ಪೊಲೀಸ್ ದೂರು ಪ್ರಾಧಿಕಾರಕ್ಕೆ ಮೇಲ್ಮನವಿ ಸಲ್ಲಿಸಬಹುದು ಎಂದು ಹೈಕೋರ್ಟ್ ಮಾರ್ಗಸೂಚಿ ರೂಪಿಸಿದೆ.

ABOUT THE AUTHOR

...view details