ಬೆಂಗಳೂರು:ಫ್ಲೆಕ್ಸ್, ಬ್ಯಾನರ್ ನಿಷೇಧಿಸುವ ಸಂಬಂಧ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ರೂಪಿಸಿದ್ದ ಜಾಹೀರಾತು ನೀತಿ ಅನುಷ್ಠಾನಕ್ಕೆ ಹೈಕೋರ್ಟ್ ಸಮ್ಮತಿ ನೀಡಿದೆ.
ಅನಧಿಕೃತ ಜಾಹೀರಾತು ತಡೆಗೆ ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಇಂದು ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠದಲ್ಲಿ ನಡೆಯಿತು. ಈ ವೇಳೆ ನ್ಯಾಯಾಲಯವು ಬಿಬಿಎಂಪಿ ಜಾಹೀರಾತು ಪ್ರದರ್ಶನಕ್ಕೆ ರೂಪಿಸಲಾಗಿರುವ ಬೈಲಾಕ್ಕೆ (ಉಪನಿಯಮ) ಸಮ್ಮತಿ ಸೂಚಿಸಿದೆ. ಮೂರು ತಿಂಗಳಲ್ಲಿ ಈ ನೀತಿಗೆ ಗೆಜೆಟ್ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಬಿಬಿಎಂಪಿ ಸಲ್ಲಿಸಿದ್ದ ಬೈಲಾಗೆ ಸರ್ಕಾರ ಮೂರು ತಿಂಗಳಲ್ಲಿ ಅನುಮತಿ ನೀಡದ ಕಾರಣ ‘ಡೀಮ್ಡ್ ಅನುಮೋದನೆ’ ಎಂದು ಪರಿಗಣಿಸಿ ಆ ಬೈಲಾವನ್ನೇ ಜಾರಿಗೊಳಿಸಲು ಕೆಎಂಸಿ ಕಾಯ್ದೆಯಡಿ ಅವಕಾಶವಿದೆ. ನಿಗದಿತ ಅವಧಿಯಲ್ಲಿ ಸರ್ಕಾರ ನಿರ್ಧಾರ ಕೈಗೊಳ್ಳಲಿಲ್ಲ. ಈ ಹಿನ್ನೆಲೆಯಲ್ಲಿ ಜಾಹೀರಾತು ನೀತಿ ಜಾರಿಗೊಳಿಸಲು ನಿರಾಕರಿಸಿದ ಸರ್ಕಾರ ಕ್ರಮ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ.
ಬಿಬಿಎಂಪಿ ಜಾಹೀರಾತು ನೀತಿಗೆ ಹೈಕೋರ್ಟ್ ಹಸಿರು ನಿಶಾನೆ - ಫ್ಲೆಕ್ಸ್, ಬ್ಯಾನರ್ ನಿಷೇಧ
ಫ್ಲೆಕ್ಸ್, ಬ್ಯಾನರ್ ನಿಷೇಧಿಸುವ ಸಂಬಂಧ ಬಿಬಿಎಂಪಿ ರೂಪಿಸಿದ್ದ ಜಾಹೀರಾತು ನೀತಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೂರು ತಿಂಗಳಲ್ಲಿ ಗೆಜೆಟ್ ಅಧಿಸೂಚನೆ ಹೊರಡಿಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
High Court Green signal to BBMP Advertising Policy
2019ರ ಜನವರಿ 1ರಂದು ಬಿಬಿಎಂಪಿ ಜಾಹೀರಾತು ನೀತಿಯನ್ನು ಅನುಮೋದನೆಗಾಗಿ ಸರ್ಕಾರಕ್ಕೆ ಕಳುಹಿಸಿತ್ತು. ಅದನ್ನು ಮಾರ್ಚ್ 31ರೊಳಗೆ ಅನುಮೋದಿಸಬೇಕಿತ್ತು. ಆದರೆ, ಜುಲೈ 31ರಂದು ಜಾಹೀರಾತು ನೀತಿ ತಿರಸ್ಕರಿಸಿ ಸರ್ಕಾರ ಆದೇಶಿಸಿತ್ತು. ಈಗ ಹೈಕೋರ್ಟ ನೀಡಿರುವ ಆದೇಶದಿಂದ ಬಿಬಿಎಂಪಿ ಸಿದ್ದಪಡಿಸಿದ್ದ ಜಾಹೀರಾತು ನೀತಿ ಜಾರಿಗೆ ಬರುವಂತಾಗಿದೆ.