ಕರ್ನಾಟಕ

karnataka

ETV Bharat / city

ಆನ್​ಲೈನ್​ ತರಗತಿ ರದ್ದು ಮಾಡಿದ್ದ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ - Online Class Cancellation

ಜೂನ್ 15 ಮತ್ತು 27ರಂದು ರಾಜ್ಯ ಸರ್ಕಾರ 1ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಆನ್​ಲೈನ್ ಶಿಕ್ಷಣವನ್ನು ರದ್ದುಗೊಳಿಸಿ ಹೊರಡಿಸಿದ್ದ ಆದೇಶಗಳಿಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ, ಆದೇಶ ಹೊರಡಿಸಿದೆ.

High Court granted Intermediate barrier to government order canceling online class
ಆನ್​ಲೈನ್​ ತರಗತಿ ರದ್ದು ಮಾಡಿದ್ದ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದ ಹೈಕೋರ್ಟ್

By

Published : Jul 8, 2020, 5:44 PM IST

ಬೆಂಗಳೂರು: ಆನ್​ಲೈನ್​ ತರಗತಿಗಳನ್ನು ರದ್ದು ಮಾಡಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿ ಆದೇಶ ಹೊರಡಿಸಿದೆ.

ಆನ್​ಲೈನ್ ತರಗತಿಗಳನ್ನು ನಿಷೇಧಿಸಿ ರಾಜ್ಯಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ, ವಿದ್ಯಾರ್ಥಿಗಳ ಪೋಷಕರು, ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಸಲ್ಲಿಸಿದ್ದ ಪ್ರತ್ಯೇಕ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ಸುದೀರ್ಘ ವಿಚಾರಣೆ ನಡೆಸಿತು.

ಬಳಿಕ ರಾಜ್ಯಸರ್ಕಾರ ಹೊರಡಿಸಿದ್ದ ಆದೇಶಕ್ಕೆ ಮದ್ಯಂತರ ಆದೇಶ ನೀಡಿರುವ ಪೀಠ, ಆನ್​ಲೈನ್ ತರಗತಿಗಳನ್ನು ನಿಷೇಧಿಸಿರುವ ರಾಜ್ಯಸರ್ಕಾರದ ಕ್ರಮ ಮೇಲ್ನೋಟಕ್ಕೆ ಸರಿ ಎನ್ನಿಸಬಹುದು. ಸಂವಿಧಾನದ ವಿಧಿ 21 ಮತ್ತು 21(ಎ) ಅಡಿ ನಾಗರೀಕರಿಗೆ ಲಭ್ಯವಿರುವ ಜೀವಿಸುವ ಮತ್ತು ಶಿಕ್ಷಣ ಪಡೆದುಕೊಳ್ಳುವ ಹಕ್ಕುಗಳನ್ನ ಸರ್ಕಾರದ ಆದೇಶ ನಿರ್ಬಂಧಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಸಂವಿಧಾನದ ವಿಧಿ 162ರ ಅಡಿಯಲ್ಲಿ ಲಭ್ಯವಿರುವ ಅಧಿಕಾರ ಬಳಸಿ ಸರ್ಕಾರ ಆದೇಶ ಹೊರಡಿಸಿದೆ ಎಂಬ ಅಡ್ವೊಕೇಟ್ ಜನರಲ್ ವಾದವನ್ನ ಹೈಕೋರ್ಟ್ ತಳ್ಳಿಹಾಕಿದೆ. ಅಲ್ಲದೇ, ಜೂನ್ 15 ಮತ್ತು 27ರಂದು ಸರ್ಕಾರ 1ರಿಂದ 10ನೇ ತರಗತಿಯ ಶಾಲಾ ಮಕ್ಕಳಿಗೆ ಆನ್​ಲೈನ್ ಶಿಕ್ಷಣವನ್ನು ರದ್ದುಗೊಳಿಸಿ ಹೊರಡಿಸಿದ್ದ ಆದೇಶಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದೇ ವೇಳೆ ನ್ಯಾಯಾಲಯದ ಆದೇಶವನ್ನು ಶಾಲಾ ಆಡಳಿತ ಮಂಡಳಿಗಳು, ಕಡ್ಡಾಯವಾಗಿ ಆನ್​ಲೈನ್ ತರಗತಿಗಳನ್ನು ನಡೆಸಬೇಕು ಎಂಬರ್ಥದಲ್ಲಿ ಭಾವಿಸಬಾರದು ಎಂದು ಪೀಠ ಸ್ಪಷ್ಟಪಡಿಸಿದೆ.

ಜೂನ್ 15ರಂದು ತಜ್ಞರ ಸಮಿತಿಯಿಂದ ವರದಿ ಬರುವವರೆಗೂ ಆನ್​ಲೈನ್ ತರಗತಿಗಳನ್ನು ನಡೆಸಬಾರದು ಎಂದು ಆದೇಶಿಸಿದ್ದ ಸರ್ಕಾರ, ಜೂನ್ 27ರಂದು ಎಲ್​ಕೆಜಿ ಯಿಂದ 5ನೇ ತರಗತಿ ಮಕ್ಕಳಿಗೆ ಆನ್​ಲೈನ್ ತರಗತಿಗಳನ್ನು ಸೀಮಿತ ಅವಧಿಯಲ್ಲಿ ನಡೆಸಬಹುದೆಂದು ಮಾರ್ಗಸೂಚಿಗಳನ್ನ ಹೊರಡಿಸಿತ್ತು. ಇದೀಗ ಹೈಕೋರ್ಟ್ ಮಧ್ಯಂತರ ಆದೇಶದಿಂದಾಗಿ ಸರ್ಕಾರದ ಈ ಆದೇಶಗಳು ತಾತ್ಕಾಲಿಕವಾಗಿ ಅಮಾನತುಗೊಂಡಿವೆ.

ABOUT THE AUTHOR

...view details