ಕರ್ನಾಟಕ

karnataka

ETV Bharat / city

ಆ್ಯಂಬುಲೆನ್ಸ್ ಟೆಂಡರ್ ರದ್ದು: ಪ್ರಮಾಣ ಪತ್ರ ಸಲ್ಲಿಸುವಂತೆ ಸಚಿವ ಸುಧಾಕರ್‌ಗೆ ಹೈಕೋರ್ಟ್ ಸೂಚನೆ - High court give notice to Minister Sudhakar

ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ ಜಾರಿಗೆ ಕರೆಯಲಾಗಿದ್ದ ಟೆಂಡರ್ ರದ್ದುಪಡಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಸಚಿವ ಡಾ. ಕೆ ಸುಧಾಕರ್​ಗೆ ಹೈಕೋರ್ಟ್ ಸೂಚನೆ ನೀಡಿದೆ.

Sudhakar
ಹೈಕೋರ್ಟ್

By

Published : Jul 7, 2021, 8:23 PM IST

ಬೆಂಗಳೂರು: ಟ್ರಾಫಿಕ್ ದಟ್ಟಣೆ ನಡುವೆಯೂ ಆ್ಯಂಬುಲೆನ್ಸ್​ಗಳ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಲು 'ಅತ್ಯಾಧುನಿಕ ತಂತ್ರಜ್ಞಾನ ಆಧಾರಿತ ಆ್ಯಂಬುಲೆನ್ಸ್ ನಿರ್ವಹಣಾ ವ್ಯವಸ್ಥೆ' ಜಾರಿಗೆ ಕರೆಯಲಾಗಿದ್ದ 1,800 ಕೋಟಿ ರೂ. ಮೊತ್ತದ ಟೆಂಡರ್ ರದ್ದುಪಡಿಸಿರುವ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಹೈಕೋರ್ಟ್ ಸಚಿವ ಡಾ. ಕೆ.ಸುಧಾಕರ್ ಅವರಿಗೆ ಸೂಚಿಸಿದೆ.

ಆ್ಯಂಬುಲೆನ್ಸ್‌ಗಳ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಜಾರಿ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಭಾರತ್ ಪುನರುತ್ಥಾನ ಟ್ರಸ್ಟ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಅರ್ಜಿದಾರರ ಪರ ವಕೀಲ ವೆಂಕಟೇಶ್ ದಳವಾಯಿ ವಾದ ಮಂಡಿಸಿ, ಸರ್ಕಾರ ಏಕಾಏಕಿ ಟೆಂಡರ್ ಹಿಂಪಡೆದಿರುವುದಕ್ಕೆ ಕಾರಣವನ್ನೇ ನೀಡಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿದ್ದರೂ ಕೋರ್ಟ್ ಅನುಮತಿ ಪಡೆಯದೆ ಟೆಂಡರ್ ರದ್ದುಪಡಿಸಿದೆ. ಸರ್ಕಾರದ ಈ ಕ್ರಮ ನಿಯಮಗಳಿಗೆ ವಿರುದ್ಧವಾಗಿದೆ ಎಂದು ಸುಪ್ರೀಂಕೋರ್ಟ್​ನ ತೀರ್ಪುಗಳನ್ನು ಉಲ್ಲೇಖಿಸಿದರು.

ಇದನ್ನೂ ಓದಿ:ಆ್ಯಂಬುಲೆನ್ಸ್ ಟೆಂಡರ್ ರದ್ದು : ಸರ್ಕಾರದ ಧೋರಣೆಗೆ ಹೈಕೋರ್ಟ್ ಅಸಮಾಧಾನ

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಟೆಂಡರ್ ಬಗ್ಗೆ ಕೋರ್ಟ್ ಮೇಲ್ವಿಚಾರಣೆ ನಡೆಸುವಾಗ ನ್ಯಾಯಾಲಯದ ಗಮನಕ್ಕೆ ತರದೆ ಏಕಾಏಕಿ ನಿರ್ಧಾರ ಬದಲಿಸಲಾಗಿದೆ. ಟೆಂಡರ್ ರದ್ದು ಮಾಡಿರುವುದು ಸರ್ಕಾರದ ನಿರ್ಧಾರವಲ್ಲ, ಬದಲಿಗೆ ಸಚಿವರ ವೈಯಕ್ತಿಕ ನಿರ್ಧಾರ ಎಂದು ಕಂಡುಬಂದಿದೆ. ಈ ರೀತಿಯ ನಿರ್ಧಾರ ಕೈಗೊಳ್ಳಲು ತಜ್ಞರ ಜೊತೆ ಚರ್ಚಿಸಲಾಗಿದೆ ಎಂದು ಹೇಳಲಾಗಿದೆ, ಆದರೆ ಅದಕ್ಕೂ ಯಾವುದೇ ದಾಖಲೆ ಸಲ್ಲಿಸಿಲ್ಲ. ಟೆಂಡರ್ ರದ್ದುಪಡಿಸಿರುವುದಕ್ಕೆ ನೀಡಿರುವ ಕಾರಣಗಳೂ ಸತ್ಯವಲ್ಲ, ಆರೋಗ್ಯ ಸಚಿವರ ಸೂಚನೆಯಂತೆ ಟೆಂಡರ್ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಕಂಡುಬಂದಿದೆ. ಹೀಗಾಗಿ ಸಚಿವ ಸುಧಾಕರ್ ಪ್ರಮಾಣಪತ್ರ ಸಲ್ಲಿಸಲಿ ಎಂದು ಅಭಿಪ್ರಾಯಪಟ್ಟ ಪೀಠ, ವಿಚಾರಣೆಯನ್ನು ಜುಲೈ 22 ಕ್ಕೆ ಮುಂದೂಡಿತು.

ABOUT THE AUTHOR

...view details