ಬೆಂಗಳೂರು : ತಮ್ಮ ಸಹಿಯನ್ನ ನಕಲು ಮಾಡಿ ಬರೆದಿರುವ ರಾಜೀನಾಮೆ ಪತ್ರವನ್ನು ಅಂಗೀಕರಿಸಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆಯಿಂದ ತಮ್ಮನ್ನು ಬಿಡುಗಡೆ ಮಾಡಿರುವ ರಾಜ್ಯ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಕೆಎಸ್ಪಿಸಿಬಿ ಮಾಜಿ ಅಧ್ಯಕ್ಷ ಡಾ. ಸುಧೀಂದ್ರರಾವ್ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿ ಆದೇಶಿಸಿದೆ.
ತಮ್ಮನ್ನು ಹುದ್ದೆಯಿಂದ ಬಿಡುಗಡೆ ಮಾಡಿರುವ ಸರ್ಕಾರದ ಆದೇಶವನ್ನು ರದ್ದುಗೊಳಿಸಬೇಕು ಎಂದು ಕೋರಿ ಸುಧೀಂದ್ರರಾವ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾ. ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ಶುಕ್ರವಾರ ಪ್ರಕಟಿಸಿದೆ. ಅರ್ಜಿದಾರರ ಸಹಿಯನ್ನು ನಕಲು ಮಾಡಲಾಗಿದೆ ಎಂಬುದರ ಕುರಿತು ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಇನ್ನು ರಾಜೀನಾಮೆ ಅಂಗೀಕರಿಸಿರುವ ಪ್ರಕ್ರಿಯೆಯೂ ಸರಿಯಾಗಿದೆ. ಹೀಗಾಗಿ ಅರ್ಜಿದಾರರ ಕೋರಿಕೆ ಪರಿಗಣಿಸಲು ಸಾಧ್ಯವಿಲ್ಲ ಎಂದು ಪೀಠ ತೀರ್ಪು ನೀಡಿದೆ.
ಅರ್ಜಿ ವಿಚಾರಣೆ ವೇಳೆ ಸುಧೀಂದ್ರರಾವ್ ಪರ ವಾದಿಸಿದ್ದ ಹಿರಿಯ ವಕೀಲ ಪಿ.ಎಸ್. ರಾಜಗೋಪಾಲ್, ಅರ್ಜಿದಾರರ ಸಹಿಗಳು ಇದ್ದಂತಹ ಖಾಲಿ ಪೇಪರ್ಗಳನ್ನು ತೋರಿಸಿ, ತಮ್ಮ ಕಕ್ಷೀದಾರರು ಯಾವುದೇ ರಾಜೀನಾಮೆ ನೀಡಿಲ್ಲ. ಬದಲಿಗೆ ನಕಲಿ ಸಹಿ ಮಾಡಿ ರಾಜೀನಾಮೆ ಪತ್ರ ಬರೆಯಲಾಗಿದೆ. ಅದನ್ನೇ ಸರ್ಕಾರ ರಾಜೀನಾಮೆಯಂತೆ ಪರಿಗಣಿಸಿ ಹುದ್ದೆಯಿಂದ ಬಿಡುಗಡೆ ಮಾಡಿದೆ.
ಜಲಮಾಲಿನ್ಯ ತಡೆ ಮತ್ತು ನಿಯಂತ್ರಣ ಕಾಯ್ದೆ-1974 ರ ಸೆಕ್ಷನ್ 5(4)ರ ಪ್ರಕಾರ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಪತ್ರ ಕೊಡಬೇಕಿತ್ತು. ಆದರೆ, ಪತ್ರದಲ್ಲಿ ಮುಖ್ಯಮಂತ್ರಿಗಳು, ರಾಜ್ಯ ಸರ್ಕಾರ ಹೆಸರಿಗೆ ರಾಜೀನಾಮೆ ಕೊಡಲಾಗಿದೆ. ಇದು ಕೂಡ ನಿಯಮ ಬಾಹಿರ. ಆದ್ದರಿಂದ ಮೇ 2ರಂದು ಹುದ್ದೆಯಿಂದ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶ ರದ್ದುಗೊಳಿಸಬೇಕು ಎಂದು ಕೋರಿದ್ದರು.
ಸರ್ಕಾರದ ಪರ ವಾದಿಸಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ, ನಕಲಿ ಸಹಿ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮಾಡಿ ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ಅರ್ಜಿದಾರರೇ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿದ್ದರೂ ತಮ್ಮ ಅನುಕೂಲಕ್ಕಾಗಿ ಸಹಿಯನ್ನೇ ಮಾಡಿಲ್ಲ ಎನ್ನುತ್ತಾರೆ. ಇದೇ ವೇಳೆ ತಮ್ಮ ರಾಜೀನಾಮೆ ಪತ್ರವನ್ನು ಅಂಗೀಕರಿಸಿರುವ ಪ್ರಕ್ರಿಯೆಯೇ ಸರಿಯಿಲ್ಲ ಎನ್ನುತ್ತಾರೆ. ಇವೆಲ್ಲವೂ ಆಧಾರ ರಹಿತವಾಗಿದ್ದು ಅರ್ಜಿದಾರರಿಗೆ ದಂಡ ವಿಧಿಸಿ, ಅರ್ಜಿ ವಜಾ ಮಾಡಬೇಕು ಎಂದು ಕೋರಿದ್ದರು.