ಬೆಂಗಳೂರು: ರಾಜ್ಯ ಸರ್ಕಾರ ಜಿಂದಾಲ್ ಸ್ಟೀಲ್ ಕಂಪನಿಗೆ 3,667 ಎಕರೆ ಸರ್ಕಾರಿ ಭೂಮಿ ಪರಭಾರೆ ಮಾಡಲು ಸಚಿವ ಸಂಪುಟದಲ್ಲಿ ಕೈಗೊಂಡಿದ್ದ ನಿರ್ಧಾರ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ.
ಈ ಕುರಿತು ನಗರದ ಕೆ.ಎ.ಪಾಲ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರ ಹಾಗೂ ಜಿಂದಾಲ್ ಕಂಪನಿ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಜಮೀನು ಪರಭಾರೆ ಕುರಿತು 2021ರ ಏಪ್ರಿಲ್ 26ರಂದು ಅಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಕೈಗೊಂಡಿದ್ದ ನಿರ್ಧಾರವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಸದ್ಯ ಈ ವಿಚಾರವು ಪರಿಶೀಲನೆಗಾಗಿ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮುಂದಿದೆ. ಮುಖ್ಯಮಂತ್ರಿಗಳು ಈ ವಿಚಾರವನ್ನು ಮರು ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ವಾದ ಪರಿಗಣಿಸಿದ ಪೀಠ, ಹಿಂದಿನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರ ಜಿಂದಾಲ್ ಕಂಪನಿಗೆ ಜಮೀನು ನೀಡಲು ತೀರ್ಮಾನಿಸಿತ್ತು. ಆದರೀಗ ಪ್ರಕರಣ ಹಾಲಿ ಸಿಎಂ ಮುಂದೆ ಮರು ಪರಿಶೀಲನೆಯಲ್ಲಿದೆ ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಹೀಗಾಗಿ ಅರ್ಜಿಯ ವಿಚಾರಣೆ ಮುಂದುವರಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿ ವಜಾಗೊಳಿಸಿ ಆದೇಶಿಸಿತು.