ಬೆಂಗಳೂರು:ನವದೆಹಲಿಯ ಫ್ಲ್ಯಾಟ್ಗಳ ಮೇಲಿನ ಐಟಿ ದಾಳಿ ಪ್ರಕರಣದಲ್ಲಿ ಇಡಿ ಸಲ್ಲಿಸಿದ್ದ ಸಮನ್ಸ್ ಪ್ರಶ್ನಿಸಿ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಮತ್ತು ಅವರ ಮೂವರು ಆಪ್ತರು ಸಲ್ಲಿಸಿದ್ದ ಮೇಲ್ಮನವಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಇಡಿ ವಿಚಾರಣೆ ಪ್ರಕರಣದಲ್ಲಿ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಲು ಅವಕಾಶ ಇಲ್ಲವೆಂದು ಅಭಿಪ್ರಾಯಪಟ್ಟ ಹೈಕೋರ್ಟ್ನ ಮುಖ್ಯನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.
ಅರ್ಜಿ ವಜಾಗೊಂಡಿರುವ ಹಿನ್ನೆಲೆ ಪ್ರಕರಣದ ಆರೋಪಿಗಳಾಗಿರುವ ಡಿಕೆಶಿ ಆಪ್ತರಾದ ಸಚಿನ್ ನಾರಾಯಣ, ಸುನಿಲ್‌ಕುಮಾರ್ ಶರ್ಮ, ಆಂಜನೇಯ ಅವರು ಜಾರಿ ನಿರ್ದೇಶನಾಲಯದ ವಿಚಾರಣೆಗೆ ಹಾಜರಾಗಬೇಕಿದೆ. ಅಲ್ಲದೆ, ಇಡಿಯು ಇವರನ್ನ ನಾಲ್ಕು ವಾರಗಳ ಕಾಲ ಬಂಧಿಸದಂತೆ ಕೋರ್ಟ್ ಸೂಚಿಸಿದೆ.
ಸಿಆರ್ಪಿಸಿ ಸೆಕ್ಷನ್ 482ರ ಅಡಿ ಈಗಾಗಲೇ ಡಿಕೆಶಿ ಸಮನ್ಸ್ ಕುರಿತು ತೀರ್ಪು ನೀಡಿರುವುದಾಗಿ ಏಕಸದಸ್ಯ ನ್ಯಾಯಪೀಠ ಹೇಳಿದೆ. ಆದರೆ ಸೆ. 482ರ ಅಡಿ ತೀರ್ಪು ನೀಡುವ ಅಧಿಕಾರ ಏಕಸದಸ್ಯ ಪೀಠಕ್ಕೆ ಇಲ್ಲ. ಹಾಗಾಗಿ ಏಕಸದಸ್ಯ ನ್ಯಾಯಪೀಠದ ತೀರ್ಪನ್ನು ರದ್ದುಪಡಿಸಬೇಕು ಎಂದು ವಿಭಾಗೀಯ ಪೀಠದ ಮುಂದೆ ಡಿ. ಕೆ. ಶಿವಕುಮಾರ್ ಪರ ಹಿರಿಯ ವಕೀಲ ಬಿ.ವಿ. ಆಚಾರ್ಯ ನಿನ್ನೆ ಮೇಲ್ಮನವಿ ಸಲ್ಲಿಸಿದ್ದರು.
ಈ ವೇಳೆ ಇಡಿ ಪರ ವಾದ ಮಂಡಿಸಿದ ಹಿರಿಯ ವಕೀಲ ಎಸ್. ನಾಗಾನಂದ ಅವರು ಸಿಆರ್ಪಿಸಿ ಸೆ. 482ರ ಅಡಿ ಏಕಸದಸ್ಯ ನ್ಯಾಯಪೀಠ ತೀರ್ಪು ಕೊಟ್ಟಿರುವುದರಿಂದ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ವಿಚಾರಣೆ ಅಂಗೀಕಾರ್ಹವಲ್ಲ. ಕ್ರಿಮಿನಲ್ ಸ್ವರೂಪದ ಪ್ರಕರಣಗಳ ಮೇಲೆ ಸಂವಿಧಾನದ ಕಲಂ 226 ಹಾಗೂ ಸಿಆರ್ಪಿಸಿ ಸೆಕ್ಷನ್ 482 ಅನ್ವಯವಾಗುತ್ತದೆ ಎಂದಿದ್ದರು. ವಾದ - ಪ್ರತಿವಾದಗಳ ಬಳಿಕ ಹೈಕೊರ್ಟ್ ವಿಭಾಗೀಯ ಪೀಠ ಮೇಲ್ಮನವಿ ರದ್ದು ಮಾಡಿದ್ದು, ಡಿಕೆಶಿ ಹಾಗೂ ಅವರ ಆಪ್ತರು ಸುಪ್ರೀಂಕೋರ್ಟ್ ಮೊರೆ ಹೋಗುವುದು ಅನಿವಾರ್ಯವಾಗಿದೆ.