ಕರ್ನಾಟಕ

karnataka

ETV Bharat / city

ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸ್ವಾತಂತ್ರ್ಯ ಪೂರ್ವದಿಂದಲೂ ಕೊಡವರಿಗೆ ಬಂದೂಕು ಇರಿಸಿಕೊಳ್ಳಲು ಪರವಾನಿಗೆ ನೀಡಲಾಗಿದೆ. ಈ ವಿನಾಯಿತಿಯಿಂದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿಲ್ಲ ಎಂದು ಹೈಕೋರ್ಟ್ ಹೇಳಿದೆ.

High Court
ಹೈಕೋರ್ಟ್

By

Published : Sep 22, 2021, 7:34 PM IST

ಬೆಂಗಳೂರು:ಕೊಡವರಿಗೆ ಬಂದೂಕು ಇರಿಸಿಕೊಳ್ಳಲು ಪರವಾನಿಗೆ ಪಡೆಯುವುದಕ್ಕೆ ವಿನಾಯಿತಿ ನೀಡಿ ಕೇಂದ್ರ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ, ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಕೊಡವರಿಗೆ ಬಂದೂಕು ಲೈಸೆನ್ಸ್ ವಿನಾಯಿತಿ ಪ್ರಶ್ನಿಸಿ ನಿವೃತ್ತ ಕ್ಯಾಪ್ಟನ್ ವೈ.ಕೆ ಚೇತನ್ ಸಲ್ಲಿಸಿದ್ದ, ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹಂಗಾಮಿ ಸಿಜೆ ಎಸ್.ಸಿ ಶರ್ಮಾ ನೇತೃತ್ವದ ವಿಭಾಗೀಯ ಪೀಠ ತೀರ್ಪು ಕಾಯ್ದಿರಿಸಿತ್ತು.

ಇಂದು ತೀರ್ಪು ಪ್ರಕಟಿಸಿರುವ ಪೀಠ, ಕೊಡವರಿಗೆ ಸ್ವಾತಂತ್ರ್ಯ ಪೂರ್ವದಿಂದಲೂ ಈ ರಿಯಾಯಿತಿ ನೀಡಲಾಗಿದೆ. ಜಮ್ಮಾ ಭೂಮಿ ಹೊಂದಿರುವವರು ಹಾಗೂ ಕೊಡವ ಸಮುದಾಯಕ್ಕೆ ಈ ರಿಯಾಯಿತಿ ಕಲ್ಪಿಸಲಾಗಿದೆ. ಈ ವಿನಾಯಿತಿಯಿಂದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆಯಾಗಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿತು.

ಅರ್ಜಿದಾರರ ಮನವಿ:

ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 1959ರ ನಿಯಮಗಳ ಪ್ರಕಾರ ಬಂದೂಕು, ಪಿಸ್ತೂಲ್, ಡಬಲ್ ಬ್ಯಾರಲ್​ ಗನ್ ಸೇರಿದಂತೆ ಶಸ್ತ್ರಾಸ್ತ್ರಗಳನ್ನು ಇಟ್ಟಕೊಳ್ಳಲು ಪ್ರತಿಯೊಬ್ಬರೂ ಪರವಾನಿಗೆ ಪಡೆಯಲೇಬೇಕು. ಆದರೆ, ಬ್ರಿಟಿಷ್ ಕಾಲದಲ್ಲಿ ಚಾಲ್ತಿಯಲ್ಲಿದ್ದ ನಿಯಮಗಳನ್ನೇ ಮುಂದುವರಿಸಿಕೊಂಡು ಬಂದಿರುವ ಸರ್ಕಾರ, ಕೊಡವರಿಗೆ ಹಾಗೂ ಜಮ್ಮಾ ಭೂಮಿ ಹೊಂದಿರುವವರಿಗೆ ಪರವಾನಿಗೆ ಪಡೆಯಲು ವಿನಾಯಿತಿ ನೀಡಿವೆ.

ಶಸ್ತ್ರಾಸ್ತ್ರ ಕಾಯ್ದೆ ನಿಯಮಗಳಿಂದ ಕೆಲವರಿಗಷ್ಟೇ ವಿನಾಯಿತಿ ನೀಡುವುದು ಅಸಾಂವಿಧಾನಿಕ. ಕೆಲವೇ ಜನರಿಗೆ ಇಂತಹ ಸೌಲಭ್ಯ ನೀಡುವುದು ಜಾತಿ, ಧರ್ಮದ ಆಧಾರದಲ್ಲಿ ತಾರತಮ್ಯ ಮಾಡಿದಂತಾಗುತ್ತದೆ. ಮೂಲತಃ ಕೊಡವ ಜನಾಂಗಕ್ಕೆ ಕತ್ತಿ, ಬಂದೂಕು ಹೊಂದುವುದು ಸಾಂಪ್ರದಾಯಿಕ ಹಕ್ಕು ಎಂಬ ಕಾರಣಕ್ಕೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯ ಇಂತಹದ್ದೊಂದು ವಿನಾಯಿತಿ ನೀಡಿದೆ.

2019ರ ಅಕ್ಟೋಬರ್ 29ರಂದು ಹೊರಡಿಸಿರುವ ಅಧಿಸೂಚನೆಯಲ್ಲಿ 2029ರ ಅಕ್ಟೋಬರ್ 31ರವರೆಗೆ ಕೊಡವರು ಹಾಗೂ ಜಮ್ಮಾ ಭೂಮಿ ಹೊಂದಿರುವವರಿಗೆ ಗನ್ ಲೈಸೆನ್ಸ್ ಪಡೆಯುವುದಕ್ಕೆ ವಿನಾಯಿತಿ ನೀಡಲಾಗಿದೆ. ಇದು ಕಾನೂನು ಬಾಹಿರ ಕ್ರಮವಾಗಿದ್ದು, ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದರು

ಇದನ್ನೂ ಓದಿ:ಕೊಡವರಿಗೆ ಬಂದೂಕು ಪರವಾನಿಗೆ ವಿನಾಯಿತಿ: ತೀರ್ಪು ಕಾಯ್ದಿರಿಸಿದ ಹೈಕೋರ್ಟ್

ABOUT THE AUTHOR

...view details