ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್ ಜಾರಿಗೊಳಿಸಿದ ಬಳಿಕ ನಗರದಲ್ಲಿ ಅತಂತ್ರರಾಗಿರುವ ವಲಸೆ ಕಾರ್ಮಿಕರನ್ನು ತಪಾಸಣೆಗೊಳಪಡಿಸಿ ನೆಗಿಟಿವ್ ವರದಿ ಬಂದರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಾರಿಗೆ ಮೂಲಕ ಅವರ ಸ್ವಂತ ಊರಿಗೆ ಕಳುಸಿಕೊಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಕೆಲಸ ಮತ್ತು ಸಂಪಾದನೆ ಇಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರಿಗೆ ಕೊರೊನಾ ಸೋಂಕು ಪರೀಕ್ಷೆ ನಡೆಸಿ, ಕಾಯಿಲೆ ಇಲ್ಲದವರನ್ನು ಅವರ ಸ್ವ ಗ್ರಾಮಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಎ. ಮಲ್ಲಿಕಾರ್ಜುನ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.
ಕೊರೊನಾ ವೈರಸ್ ನಿಯಂತ್ರಣ ಕ್ರಮವಾಗಿ ಕೇಂದ್ರ ಸರ್ಕಾರ, ವಲಸೆ ಕಾರ್ಮಿಕರು ಸದ್ಯ ಯಾವ ರಾಜ್ಯದಲ್ಲಿ ಅಥವಾ ಕೇಂದ್ರಾಳಿತ ಪ್ರದೇಶದಲ್ಲಿದ್ದಾರೋ ಅಲ್ಲಿಂದ ಹೊರಹೋಗಬಾರದು ಎಂದು ಕಳೆದ ಮಾ.29 ರಂದು ಆದೇಶ ಮಾಡಿದೆ. ಅದೇ ಆದೇಶ ಪುನರುಚ್ಚರಿಸಿ ಏ.19 ರಂದು ಮಾದರಿ ನಿರ್ವಹಣಾ ವ್ಯವಸ್ಥೆಯನ್ನು ಪ್ರಕಟಿಸಿದೆ. ಈ ಸಂದರ್ಭದಲ್ಲಿ ಸರ್ಕಾರದ ಆದೇಶಕ್ಕೆ ವಿರುದ್ಧವಾಗಿ ಅರ್ಜಿದಾರರ ಮನವಿ ಪುರಸ್ಕರಿಸುವುದು ಸೂಕ್ತವಲ್ಲ ಎಂದು ಪೀಠ ಅಭಿಪ್ರಾಯಪಟ್ಟಿದೆ.
ಪ್ರಕರಣದ ಹಿನ್ನೆಲೆ: ಲಾಕ್‌ಡೌನ್ ಜಾರಿ ಮಾಡಿದ ನಂತರ ವಲಸೆ ಕಾರ್ಮಿಕರನ್ನು ತಾತ್ಕಾಲಿಕ ಆಶ್ರಯ ಕೇಂದ್ರಗಳಲ್ಲಿ 14 ದಿನ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಯಾವುದೇ ರೋಗದ ಲಕ್ಷಣ ಕಂಡು ಬರದಿದ್ದರೂ ಸಹ ಕಾರ್ಮಿಕರನ್ನು ಆಶ್ರಯ ಕೇಂದ್ರಗಳಲ್ಲಿ ಇಡುವುದು ಅವೈಜ್ಞಾನಿಕ, ಇದೇ ವೇಳೆ ಕಾರ್ಮಿಕರು ಕೆಲಸ, ಸಂಪಾದನೆ ಇಲ್ಲದೆ ಕಂಗಾಲಾಗಿದ್ದಾರೆ. ಊಟ ತಿಂಡಿಗೂ ಪರದಾಡುತ್ತಿದ್ದಾರೆ. ಹೀಗಾಗಿ, ಆಶ್ರಯ ಕೇಂದ್ರಗಳಲ್ಲಿರುವ ರಾಜ್ಯದ ಮತ್ತು ಹೊರ ರಾಜ್ಯದ ವಲಸೆ ಕಾರ್ಮಿಕರನ್ನು ತಪಾಸಣೆಗೊಳಪಡಿಸಿ, ಸೋಂಕಿಲ್ಲದವರನ್ನು ಸರ್ಕಾರಿ ಸಾರಿಗೆ ಮೂಲಕ ಅವರ ಸ್ವಂತ ಊರಿಗೆ ಕಳಿಸಿಕೊಡುವ ವ್ಯವಸ್ಥೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.