ಕರ್ನಾಟಕ

karnataka

ETV Bharat / city

ಅನಧಿಕೃತ ಕಟ್ಟಡಗಳ ತೆರವು: ಆದೇಶ ಪಾಲಿಸದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ಗರಂ - bangalore news

ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

 High Court disappointed about BBMP over Clearance of unauthorized buildings
High Court disappointed about BBMP over Clearance of unauthorized buildings

By

Published : Jul 7, 2021, 5:53 AM IST

ಬೆಂಗಳೂರು: ನಗರದಲ್ಲಿರುವ ಅನಧಿಕೃತ ಕಟ್ಟಡಗಳನ್ನು ತೆರವು ಮಾಡಲು ಹೈಕೋರ್ಟ್ 2019ರಲ್ಲಿಯೇ ಆದೇಶಿಸಿದ್ದರೂ ಸಮರ್ಪಕ ಕ್ರಮಗಳನ್ನು ಕೈಗೊಳ್ಳದ ಬಿಬಿಎಂಪಿ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಅನಧಿಕೃತ ಕಟ್ಟಡಗಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯಪೀಠ ವಿಚಾರಣೆ ನಡೆಸಿತು.

ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ಅವರ ಪ್ರಮಾಣಪತ್ರ ವಕೀಲರು ಪೀಠಕ್ಕೆ ಸಲ್ಲಿಸಿದರು.ಪ್ರಮಾಣಪತ್ರದಲ್ಲಿ ಮೊದಲಿಗೆ ಪರವಾನಿಗೆ ನಿಯಮಗಳನ್ನು ಉಲ್ಲಂಘಿಸಿದ ಕಟ್ಟಡಗಳ ಸರ್ವೆ ನಡೆಸಲಾಗುವುದು. ಆ ಬಳಿಕ ಪರವಾನಿಗೆ ಇಲ್ಲದೇ ನಿರ್ಮಿಸಿದ ಕಟ್ಟಡಗಳ ಸರ್ವೆ ನಡೆಸಿ ಅವುಗಳ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದ ಅಂಶವನ್ನು ಗಮನಿಸಿದ ಪೀಠ, ಪಾಲಿಕೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿತು.

ಪಾಲಿಕೆ ಆಯುಕ್ತರು ಜೂನ್ 24ರಂದು ನಡೆಸಿರುವ ಸಭೆಯ ನಡಾವಳಿಯಲ್ಲಿ ಪರವಾನಿಗೆ ಉಲ್ಲಂಘಿಸಿರುವ ಕಟ್ಟಡಗಳನ್ನು ಗುರುತಿಸುವುದಕ್ಕೆ ಮೊದಲ ಆದ್ಯತೆ ಎಂದು ದಾಖಲಿಸಲಾಗಿದೆ. ಇದು ಪರವಾನಿಗೆಯೇ ಇಲ್ಲದೆ ನಿರ್ಮಿಸಿದ ಕಟ್ಟಡಗಳ ತೆರವಿಗೆ ಪಾಲಿಕೆ ಹಿಂದೇಟು ಹಾಕುತ್ತಿರುವುದನ್ನು ಸೂಚಿಸುತ್ತದೆ. ಅಲ್ಲದೇ, ಅನಧಿಕೃತ ಕಟ್ಟಡಗಳ ತೆರವಿಗೆ 2ನೇ ಆದ್ಯತೆ ನೀಡಲಾಗುತ್ತಿದೆ, ಪರವಾನಿಗೆ ಇಲ್ಲದ ಕಟ್ಟಡಗಳ ತೆರವಿಗೆ ಮೊದಲ ಆದ್ಯತೆ ನೀಡಬೇಕು. 2019 ರಲ್ಲೇ ತೆರವಿಗೆ ಆದೇಶಿಸಿದ್ದರೂ ಅನಧಿಕೃತ ಕಟ್ಟಡಗಳ ತೆರವಿಗೆ ಕ್ರಮ ಕೈಗೊಂಡಿಲ್ಲವೇಕೆ ಎಂದು ಪ್ರಶ್ನಿಸಿತು.

ಪಾಲಿಕೆ ಪರ ವಕೀಲರು ಸಮಜಾಯಿಸಿ ನೀಡಲು ಪ್ರಯತ್ನಿಸಿದರು. ಪಾಲಿಕೆಯ ಉದ್ದೇಶ ಆ ರೀತಿಯಿಲ್ಲ. ಪರವಾನಿಗೆ ನಿಯಮಗಳನ್ನು ಉಲ್ಲಂಸಿದ ಕಟ್ಟಡಗಳನ್ನು ಗುರುತಿಸುವ ಜೊತೆಗೆ ಪರವಾನಿಗೆ ಇಲ್ಲದೆ ನಿರ್ಮಿಸಿರುವ ಕಟ್ಟಡಗಳನ್ನು ಸಮೀಕ್ಷೆ ನಡೆಸಲಾಗುವುದು, ಅದರ ಜೊತೆಗೆ ತೆರವುಗೊಳಿಸುವ ಕಾರ್ಯವನ್ನೂ ಕೈಗೊಳ್ಳಲಾಗುವುದು ಎಂದರು.

ಪೀಠ ಒಪ್ಪದ ಹಿನ್ನೆಲೆ ಪಾಲಿಕೆ ಪರ ವಕೀಲರು, ಆಯುಕ್ತರ ಪ್ರಮಾಣಪತ್ರವನ್ನು ಹಿಂಪಡೆದು ಹೊಸದಾಗಿ ಪ್ರಮಾಣಪತ್ರ ಸಲ್ಲಿಸಲು ಕಾಲಾವಕಾಶ ಕೋರಿದರು. ಮನವಿ ಹಿನ್ನೆಲೆಯಲ್ಲಿ ಹೊಸ ಪ್ರಮಾಣಪತ್ರ ಸಲ್ಲಿಸಲು ಅವಕಾಶ ನೀಡಿದ ಪೀಠ ವಿಚಾರಣೆಯನ್ನು ಜುಲೈ 29 ಕ್ಕೆ ಮುಂದೂಡಿತು.

ABOUT THE AUTHOR

...view details