ಕರ್ನಾಟಕ

karnataka

ETV Bharat / city

ಶಾಲೆಗಳ ಪುನಾರಂಭ: ಮುನ್ನೆಚ್ಚರಿಕೆ ಕ್ರಮಗಳ ಕುರಿತು ವರದಿ ಸಲ್ಲಿಸಲು ಹೈಕೋರ್ಟ್ ಸೂಚನೆ - ಕೋವಿಡ್ ಮಾರ್ಗಸೂಚಿ

ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವಿಧಾನದ ಮೇಲೆ ನಿಗಾ ಇಡಲು ಮತ್ತು ಮಾರ್ಗಸೂಚಿ ಪಾಲನೆ ಬಗ್ಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಪರಿಶೀಲಿಸಬೇಕು. ಶಾಲೆಗಳು ಆರಂಭವಾದ ನಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿತು.

high court
high court

By

Published : Aug 24, 2021, 1:57 AM IST

ಬೆಂಗಳೂರು: ರಾಜ್ಯದ ಶಾಲೆಗಳನ್ನು ಹಂತ ಹಂತವಾಗಿ ಪ್ರಾರಂಭಿಸುವುದು ಸೋಂಕು ಹೆಚ್ಚಳಕ್ಕೆ ಕಾರಣವಾಗಬಹುದೇ ಎಂದು ಆತಂಕ ವ್ಯಕ್ತಪಡಿಸಿರುವ ಹೈಕೋರ್ಟ್, ಮುನ್ನೆಚ್ಚರಿಕೆ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಸೂಚಿಸಿದೆ.


ಕೋವಿಡ್ ಹಿನ್ನೆಲೆಯಲ್ಲಿ ಮುಚ್ಚಿರುವ ಶಾಲೆಗಳನ್ನು ಪುನಾರಂಭಿಸಲು ನಿರ್ದೇಶನ ಕೋರಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ವಿ ನಾಗರತ್ನ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ. ವಿಚಾರಣೆ ವೇಳೆ ಸರ್ಕಾರದ ಪರ ವಕೀಲರು, ಶಾಲೆಗಳ ಪುನಾರಂಭಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ 9-10ನೇ ತರಗತಿಗಳನ್ನು ಆರಂಭಿಸಿದ್ದು, ಉಳಿದ ತರಗತಿಗಳ ಪ್ರಾರಂಭದ ಕುರಿತು ಮುಂದಿನ ದಿನಗಳಲ್ಲಿನ ಪರಿಸ್ಥಿತಿ ಆಧರಿಸಿ ತೀರ್ಮಾನ ಮಾಡಲಾಗುವುದು ಎಂದು ವಿವರಿಸಿದರು.


ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಶಾಲೆಗಳ ಪುನಾರಂಭದಿಂದ ಕೋವಿಡ್ ಸೋಂಕು ಹೆಚ್ಚಲು ಕಾರಣವಾಗಬಹುದೇ ಎಂದು ಪ್ರಶ್ನಿಸಿತು. ಜತೆಗೆ, ಈ ಕಾರಣಕ್ಕಾಗಿಯೇ ನ್ಯಾಯಾಲಯ ಶಾಲೆ ಪುನಾರಂಭಿಸುವ ಕುರಿತು ದಿನಾಂಕ ನಿಗದಿಪಡಿಸಿರಲಿಲ್ಲ. ಶಾಲೆಗಳ ಆರಂಭ ಸೋಂಕು ಹೆಚ್ಚಲು ಕಾರಣವಾಗಬಾರದು ಎಂದಿತು. ಇದೇ ವೇಳೆ, ಅರ್ಜಿದಾರರ ಪರ ವಕೀಲರು, ಶಾಲೆಗಳ ಪುನಾರಂಭಕ್ಕೆ ದಿನಾಂಕ ನಿಗದಿಪಡಿಸುವಂತೆ ಮಾಡಿದ ಮನವಿಯನ್ನು ಪೀಠ ತಳ್ಳಿಹಾಕಿತು.


ಅಲ್ಲದೇ, ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಎಲ್ಲ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಗಳ ಸದಸ್ಯ ಕಾರ್ಯದರ್ಶಿಗಳು ಶಾಲೆಗಳಿಗೆ ಭೇಟಿ ನೀಡಿ ಅಲ್ಲಿ ಕೋವಿಡ್ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬ ಬಗ್ಗೆ ಪರಿಶೀಲಿಸಿ ವರದಿ ಸಲ್ಲಿಸಬೇಕು. ಆ ವರದಿಗಳನ್ನು ಕ್ರೂಢೀಕರಿಸಿ ರಾಜ್ಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಮಗ್ರ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿತು.


ಶಾಲೆಗಳಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಶೈಕ್ಷಣಿಕ ಸಂಸ್ಥೆಗಳಲ್ಲಿ ಬೋಧನಾ ವಿಧಾನದ ಮೇಲೆ ನಿಗಾ ಇಡಲು ಮತ್ತು ಮಾರ್ಗಸೂಚಿ ಪಾಲನೆ ಬಗ್ಗೆ ರಾಜ್ಯ ಸರ್ಕಾರ ಮತ್ತು ಅಧಿಕಾರಿಗಳು ಪರಿಶೀಲಿಸಬೇಕು. ಶಾಲೆಗಳು ಆರಂಭವಾದ ನಂತರ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಪೀಠ ಸೂಚಿಸಿತು.

ABOUT THE AUTHOR

...view details