ಬೆಂಗಳೂರು:ರಾಯಚೂರಿನಲ್ಲಿ ಜಿಲ್ಲಾ ನ್ಯಾಯಾಲಯದ ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಸಂಬಂಧಪಟ್ಟವರಿಗೆ ಕೋರುವಂತೆ ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಹೈಕೋರ್ಟ್ ನಿರ್ದೇಶಿಸಿದೆ.
ಈ ಕುರಿತು ರಾಯಚೂರಿನ ಪಿ. ಬಸವರಾಜು ಸೇರಿದಂತೆ 23 ಮಂದಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಸರ್ಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ರಾಜ್ಯ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದ ಕಾರಣ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲು ಕೋರಿದ್ದ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಹಿಂದಿರುಗಿಸಿದೆ. ಹಾಗೆಯೇ ಪ್ರಸ್ತಾವನೆಯನ್ನು 2022 - 23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಸಲ್ಲಿಸುವಂತೆ ಕೋರಿದೆ ಎಂದು ತಿಳಿಸಿದರು.
ಇದಕ್ಕೆ ಒಪ್ಪದ ಪೀಠ, ರಾಜ್ಯ ಸರ್ಕಾರ ರಾಯಚೂರಿನಲ್ಲಿ ಹೊಸ ಜಿಲ್ಲಾ ನ್ಯಾಯಾಲಯ ಸಂಕೀರ್ಣ ನಿರ್ಮಿಸಲು 10 ಎಕರೆ 32 ಗುಂಟೆ ಜಮೀನು ನೀಡಿದೆ. ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂಪಾಯಿ ಹಣ ಬಿಡುಗಡೆ ಮಾಡಿದೆ.
ಹಿಂದಿನ ವಿಚಾರಣೆ ವೇಳೆ ರಾಯಚೂರು ಜಿಲ್ಲಾ ಪ್ರಧಾನ ನ್ಯಾಯಾಧೀಶರು ಸಲ್ಲಿಸಿರುವ ವರದಿಯಂತೆ ಹಾಲಿ ಕಟ್ಟಡ ಕುಸಿಯುವ ಹಂತದಲ್ಲಿದೆ. ಹೀಗಾಗಿ ಸರ್ಕಾರ ಈ ವಿಚಾರವನ್ನು ತುರ್ತಾಗಿ ಪರಿಗಣಿಸಿ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಬೇಕು. ಈ ಕುರಿತು ಕಾನೂನು ಇಲಾಖೆ ಪ್ರಧಾನ ಕಾರ್ಯದರ್ಶಿ ಸಂಬಂಧಪಟ್ಟವರಿಗೆ ತಿಳಸಬೇಕು. ಅಡ್ವೊಕೇಟ್ ಜನರಲ್ ಕೂಡ ಈ ಬಗ್ಗೆ ಸರ್ಕಾರದ ಗಮನ ಸೆಳೆದು ಅಗತ್ಯ ಕ್ರಮಕ್ಕೆ ಸೂಚಿಸಬೇಕು ಎಂದು ನಿರ್ದೇಶಿಸಿತು.
ಅಲ್ಲದೇ, ನ್ಯಾಯದಾನಕ್ಕೆ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ನ್ಯಾಯಾಂಗಕ್ಕೆ ಒದಗಿಸಬೇಕಿರುವುದು ಸರ್ಕಾರದ ಆದ್ಯ ಕರ್ತವ್ಯ. ಹೀಗಾಗಿ ಹಣಕಾಸು ಇಲಾಖೆ ಆರ್ಥಿಕ ಮುಗ್ಗಟ್ಟು ಕಾರಣ ನೀಡಿ, ಹಣ ಬಿಡುಗಡೆಗೆ ನಿರಾಕರಿಸಿರುವುದು ಸರ್ಕಾರಕ್ಕೆ ಶೋಭೆ ತರುವಂತದ್ದಲ್ಲ. ಹೀಗಾಗಿ ಸರ್ಕಾರ ಕೋರ್ಟ್ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಯಾವುದೇ ಕಾರಣಗಳನ್ನು ನೀಡದೇ ತ್ವರಿತವಾಗಿ ಹಣ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶಿಸಿ, ವಿಚಾರಣೆಯನ್ನು ಜನವರಿ ಮೊದಲ ವಾರಕ್ಕೆ ಮುಂದೂಡಿತು.
(ಇದನ್ನೂ ಓದಿ: Omicron ಸೋಂಕಿತ ವೈದ್ಯನಿಗೆ 14 ದಿನದ ಕ್ವಾರಂಟೈನ್ ಬಳಿಕವೂ ಪಾಸಿಟಿವ್)