ಕರ್ನಾಟಕ

karnataka

ETV Bharat / city

ನಿರ್ಗತಿಕರಿಗೆ ಅಗತ್ಯ ಆಹಾರ ಪೂರೈಸಲು ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ - High Court directs the government to supply food to the needy

ಕೊರೊನಾ ವೈರಸ್ ಭೀತಿಯಿಂದ ದೇಶದಲ್ಲಿ 21 ದಿನಗಳ ಕಾಲ ಲಾಕ್‌ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಪೂರೈಸಲು ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ನಿರ್ದೇಶಿಸಿದೆ.

High Court
ಹೈಕೋರ್ಟ್

By

Published : Mar 27, 2020, 11:24 AM IST

ಬೆಂಗಳೂರು :ರಾಜ್ಯದಲ್ಲಿರುವ ಕೂಲಿ ಕಾರ್ಮಿಕರು, ವಲಸೆ ಕಾರ್ಮಿಕರು ಹಾಗೂ ನಿರ್ಗತಿಕರಿಗೆ ಅಗತ್ಯ ಪ್ರಮಾಣದಲ್ಲಿ ಆಹಾರ ಪೂರೈಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ನಿರ್ಗತಿಕರಿಗೆ ಆಹಾರ ಸೇರಿದಂತೆ ಅವಶ್ಯಕ ವಸ್ತುಗಳನ್ನು ಪೂರೈಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ವಿವಿಧ ಕಾರ್ಮಿಕ ಸಂಘಟನೆಗಳು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಒಂದು ಇ ಮೇಲ್ ಹಾಗೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಎರಡು ಪತ್ರಗಳನ್ನು ಬರೆದಿವೆ. ಈ ಪತ್ರಗಳನ್ನೇ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನಾಗಿ ಪರಿವರ್ತಿಸಿಕೊಂಡು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಬಳಿಕ ಸರ್ಕಾರಕ್ಕೆ ನಿರ್ದೇಶನ ನೀಡಿದ ಪೀಠ, ಹೈಕೋರ್ಟ್ ಹಾಗೂ ಕಾನೂನು ಸೇವಾ ಪ್ರಾಧಿಕಾರಕ್ಕೆ ಬರೆಯಲಾಗಿರುವ ಪತ್ರಗಳಲ್ಲಿನ ಮನವಿಯನ್ನು ಸರ್ಕಾರ ಪರಿಗಣಿಸಬೇಕು. ಆ ಪತ್ರಗಳನ್ನು ಅಡ್ವೊಕೇಟ್ ಜನರಲ್ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪರಿಗಣಿಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿತು.

ಅಲ್ಲದೆ, ಕಾರ್ಮಿಕ ಸಂಘಟನೆಗಳು ಬರೆದಿರುವ ಮೂರು ಪತ್ರಗಳನ್ನು ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವಂತೆ ಸಲ್ಲಿಸಲಾಗಿರುವ ಪಿಐಎಲ್ ಜತೆಗೆ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ, ಪ್ರಕರಣದ ವಿಚಾರಣೆಯನ್ನು ಮಾರ್ಚ್ 30 ಕ್ಕೆ ಮುಂದೂಡಿತು.

ABOUT THE AUTHOR

...view details