ಬೆಂಗಳೂರು: ನಗರದ ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ)ನಲ್ಲಿ ರೇಸ್ ಕುದುರೆಗಳನ್ನು ಹಿಂಸಿಸಲಾಗುತ್ತಿದೆ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್, ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಅಧಿಕಾರಿಗಳು ಬಿಟಿಸಿ ಒಳಗೆ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದೆ.
ಟರ್ಫ್ ಕ್ಲಬ್ ಪರಿಶೀಲಿಸಲು ಪ್ರಾಣಿ ಕಲ್ಯಾಣ ಮಂಡಳಿಗೆ ಹೈಕೋರ್ಟ್ ನಿರ್ದೇಶನ - ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ
ಬೆಂಗಳೂರು ಟರ್ಫ್ ಕ್ಲಬ್ (ಬಿಟಿಸಿ)ನಲ್ಲಿರುವ ಎಲ್ಲಾ ಕುದುರೆಗಳ ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಅಧಿಕಾರಿಗಳಿಗೆ ಹೈಕೋರ್ಟ್ ನಿರ್ದೇಶಿಸಿದೆ.

ಈ ಕುರಿತು ಪ್ರಾಣಿ ದಯಾ ಸಂಘಟನೆ ಕ್ಯೂಪಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲಕಾಲ ವಾದ ಆಲಿಸಿದ ಪೀಠ, ಪ್ರದರ್ಶನ ಪ್ರಾಣಿಗಳ ನೋಂದಣಿ ಕಾಯ್ದೆ ನಿಯಮಗಳ ಪ್ರಕಾರ ಆಗಾಗ್ಗೆ ಪ್ರಾಣಿಗಳ ದೇಹ ಸ್ಥಿತಿ ತಪಾಸಣೆ ನಡೆಸಿ, ಪ್ರಾಣಿ ಕಲ್ಯಾಣ ಮಂಡಳಿಗೆ ವರದಿ ಸಲ್ಲಿಸುವುದು ಕಡ್ಡಾಯ. ಆದರೆ ಬಿಟಿಸಿ ಹಲವು ವರ್ಷಗಳಿಂದ ವರದಿ ನೀಡಿಲ್ಲ. ಹೀಗಾಗಿ ಬಿಟಿಸಿಯಲ್ಲಿರುವ ಎಲ್ಲಾ ಕುದುರೆಗಳನ್ನು ತಪಾಸಣೆ ನಡೆಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶಿಸಿದೆ.
ಅರ್ಜಿದಾರರು 900ಕ್ಕೂ ಹೆಚ್ಚು ರೇಸ್ ಕುದುರೆಗಳನ್ನು ಹೊಂದಿರುವ ಬಿಟಿಸಿಯಲ್ಲಿ ಪ್ರಾಣಿ ಹಿಂಸೆ ನಡೆಯುತ್ತಿದೆ. ರೇಸ್ನಲ್ಲಿ ಭಾಗವಹಿಸುವ ಕುದುರೆಗಳನ್ನು ಅಮಾನವೀಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಇತ್ತೀಚೆಗೆ 40 ಕುದುರೆಗಳನ್ನು ಕೊಲ್ಲಲಾಗಿದೆ. ನಿಯಮಗಳ ಪ್ರಕಾರ ಪ್ರತಿಯೊಂದು ಕುದುರೆಯನ್ನು ಪ್ರಾಣಿ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿಸಬೇಕು. ಹಾಗೆಯೇ ಕುದುರೆಗಳ ಸ್ಥಿತಿಗತಿ, ಸಾವು ಮತ್ತಿತರೆ ವಿಷಯಗಳ ಕುರಿತು ವರದಿ ಸಲ್ಲಿಸಬೇಕು. ಆದರೆ ನಿಯಮಗಳನ್ನು ಗಾಳಿಗೆ ತೂರಿರುವ ಬಿಟಿಸಿ ಹಣಕ್ಕಾಗಿ ಕುದುರೆಗಳನ್ನು ಹಿಂಸಿಸುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.