ಕರ್ನಾಟಕ

karnataka

ETV Bharat / city

ಫುಟ್​​ಪಾತ್ ಮೇಲೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ಸ್ : ತೆರವಿಗೆ ಸೂಕ್ತ ನಿರ್ಣಯ ಕೈಗೊಳ್ಳಲು ಹೈಕೋರ್ಟ್ ನಿರ್ದೇಶನ

ಪಾಲಿಕೆ ಪರ ವಕೀಲರು ವಾದಿಸಿ, ಜಂಟಿ ಸಮೀಕ್ಷೆಯಲ್ಲಿ ಪಾದಚಾರಿ ಮಾರ್ಗದ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಲಾಗಿದೆ. ಬೆಸ್ಕಾಂ ಅವುಗಳನ್ನು ಅಳವಡಿಸುವಾಗ ಪಾಲಿಕೆಯ ಅನುಮತಿ ಪಡೆದಿಲ್ಲ. ಹೀಗಾಗಿ, ಪಾಲಿಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ..

High Court
ಹೈಕೋರ್ಟ್

By

Published : Aug 4, 2021, 5:54 PM IST

ಬೆಂಗಳೂರು :ನಗರದ 8 ವಲಯಗಳಲ್ಲಿ ಫುಟ್‌ಪಾತ್ ಮೇಲೆ ಈಗಾಗಲೇ ಸ್ಥಾಪಿಸಿರುವ ವಿದ್ಯುತ್ ಟ್ರಾನ್ಸ್ ಫಾರ್ಮರ್​​ಗಳನ್ನು ತೆರವುಗೊಳಿಸುವ ಸಂಬಂಧ ಬಿಬಿಎಂಪಿ ಮತ್ತು ಬೆಸ್ಕಾಂ ಅಧಿಕಾರಿಗಳನ್ನು ಒಳಗೊಂಡ ಸಮನ್ವಯ ಸಮಿತಿ 2 ವಾರಗಳಲ್ಲಿ ಸಭೆ ಸೇರಿ, ಸೂಕ್ತ ನಿರ್ಣಯ ಕೈಗೊಳ್ಳಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ನಗರದ ಪಾದಚಾರಿ ಮಾರ್ಗ ಹಾಗೂ ರಾಜಕಾಲುವೆಗಳ ಮೇಲಿರುವ ಟ್ರಾನ್ಸ್‌ ಫಾರ್ಮರ್‌ಗಳನ್ನು ತೆರವು ಮಾಡಲು ನಿರ್ದೇಶಿಸುವಂತೆ ಕೋರಿ ನಿವೃತ್ತ ವಿಂಗ್ ಕಮಾಂಡರ್ ವಿ ಜಿ ಅತ್ರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಬೆಸ್ಕಾಂ ಪರ ವಾದಿಸಿದ ವಕೀಲ ಶ್ರೀರಂಗ, ಸಮನ್ವಯ ಸಮಿತಿ ಕಳೆದ ಜುಲೈ 17ರಂದು ಸಭೆ ನಡೆಸಿದೆ. ಆದರೆ, ಪಾಲಿಕೆ ಮತ್ತು ಬೆಸ್ಕಾಂ ಅಧಿಕಾರಿಗಳ ತಂಡ ಜಂಟಿ ಪರಿಶೀಲನೆ ನಡೆಸಿ ಸಲ್ಲಿಸಿರುವ ವರದಿ ಲಭ್ಯವಾಗದ ಕಾರಣ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಾಲಿಕೆ ಪರ್ಯಾಯ ಜಾಗವನ್ನು ಸೂಚಿಸಿದರೆ ಬೆಸ್ಕಾಂ ಟ್ರಾನ್ಸ್‌ ಫಾರ್ಮರ್‌ಗಳನ್ನು ತೆರವುಗೊಳಿಸಲಿದೆ ಎಂದರು.

ಪಾಲಿಕೆ ಪರ ವಕೀಲರು ವಾದಿಸಿ, ಜಂಟಿ ಸಮೀಕ್ಷೆಯಲ್ಲಿ ಪಾದಚಾರಿ ಮಾರ್ಗದ ಮೇಲಿನ ಟ್ರಾನ್ಸ್‌ಫಾರ್ಮರ್‌ಗಳನ್ನು ಗುರುತಿಸಲಾಗಿದೆ. ಬೆಸ್ಕಾಂ ಅವುಗಳನ್ನು ಅಳವಡಿಸುವಾಗ ಪಾಲಿಕೆಯ ಅನುಮತಿ ಪಡೆದಿಲ್ಲ. ಹೀಗಾಗಿ, ಪಾಲಿಕೆ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಪಾಲಿಕೆ ಹಾಗೂ ಬೆಸ್ಕಾಂ ಅಧಿಕಾರಿಗಳು ಕಚೇರಿಯಿಂದ ಹೊರಬಂದು ಬೀದಿಯಲ್ಲಿ ನಿಂತರೆ ಸಾಕು ಪಾದಚಾರಿ ಮಾರ್ಗದ ಮೇಲಿನ ಟ್ರಾನ್ಸ್ ಫಾರ್ಮರ್ ಗಳು ಗೋಚರಿಸುತ್ತವೆ. ಅವು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ ಎಂಬುದೂ ತಿಳಿಯುತ್ತದೆ ಎಂದು ಕಟುವಾಗಿ ನುಡಿಯಿತು.

ಇದೇ ವೇಳೆ ಅರ್ಜಿದಾರರ ಪರ ವಕೀಲ ಜಿ.ಆರ್. ಮೋಹನ್ ವಾದಿಸಿ, ಈಗಾಗಲೇ ಮಳೆಗಾಲ ಶುರುವಾಗಿದೆ. ಈಗ ಟ್ರಾನ್ಸ್ ಫಾರ್ಮರ್​​ಗಳು ಇನ್ನೂ ಅಪಾಯಕಾರಿಯಾಗಲಿವೆ. ಪಾಲಿಕೆ ಮತ್ತು ಬೆಸ್ಕಾಂ ನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲ ಎಂದರು.

ಹೇಳಿಕೆಗಳನ್ನು ದಾಖಲಿಸಿಕೊಂಡ ಪೀಠ, ಬೆಸ್ಕಾಂ ಹಾಗೂ ಬಿಬಿಎಂಪಿ ಅಧಿಕಾರಿಗಳ ಸಮನ್ವಯ ಸಮಿತಿ ಎರಡು ವಾರಗಳಲ್ಲಿ ಸಭೆ ನಡೆಸಬೇಕು. ಹಾಗೆಯೇ, ಟ್ರಾನ್ಸ್ ಫಾರ್ಮರ್​​ಗಳ ತೆರವು ಕುರಿತು ಸೂಕ್ತ ನಿರ್ಧಾರ ಕೈಗೊಂಡು ಆ ಕುರಿತು ಆ.12ರೊಳಗೆ ನ್ಯಾಯಾಲಯಕ್ಕೆ ವರದಿ ನೀಡಬೇಕು ಎಂದು ನಿರ್ದೇಶಿಸಿ ವಿಚಾರಣೆಯನ್ನು ಆ.13ಕ್ಕೆ ಮುಂದೂಡಿತು.

ABOUT THE AUTHOR

...view details