ಬೆಂಗಳೂರು: ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ (Kollur mookambika temple) ನಿರ್ವಹಣಾ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಚಂದ್ರಶೇಖರ ಶೆಟ್ಟಿ ಅವರ ನೇಮಕವನ್ನು ಹೈಕೋರ್ಟ್(high court) ಅಸಿಂಧುಗೊಳಿಸಿದೆ.
ದೇವಸ್ಥಾನ ನಿರ್ವಹಣಾ ಸಮಿತಿ ಅಧ್ಯಕ್ಷರ ಆಯ್ಕೆ ಪ್ರಶ್ನಿಸಿ ಉಡುಪಿಯ ಗೋಪಾಲಕೃಷ್ಣ ಹಾಗೂ ಇತರೆ ಮೂವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ಪೀಠ ಆದೇಶ ಹೊರಡಿಸಿದೆ. ಅಧ್ಯಕ್ಷರ ಆಯ್ಕೆ ಸಂಬಂಧ 2021ರ ಏಪ್ರಿಲ್ 26 ರಂದು ನಡೆದಿದ್ದ ಸಭೆ ಮತ್ತು ಆಯ್ಕೆ ಪ್ರಕ್ರಿಯೆಗಳನ್ನು ರದ್ದುಪಡಿಸಿ ಕೋರ್ಟ್ ಆದೇಶಿಸಿದೆ.
ದೇವಸ್ಥಾನದ ನಿರ್ವಹಣಾ ಸಮಿತಿಯ ಸದಸ್ಯರಾಗಿದ್ದ ಗಣೇಶ್ ಕಿಣಿ ಹಾಗೂ ಚಂದ್ರಶೇಖರ ಶೆಟ್ಟಿ ಮಾರ್ಚ್ 24 ಹಾಗೂ ಏಪ್ರಿಲ್ 15ರಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರ ಹೊರತಾಗಿಯೂ ಅವರನ್ನು ಹಾಲಿ ಸಮಿತಿ ಸದಸ್ಯರೆಂದು ಪರಿಗಣಿಸಿ ಏಪ್ರಿಲ್ 26 ರಂದು ನಡೆದ ಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ಅಲ್ಲದೇ, ಈ ಸಭೆಯಲ್ಲಿ ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪ ವ್ಯಕ್ತಪಡಿಸಿದ್ದರು.
ಇದನ್ನೂ ಓದಿ:ಉತ್ತರ ಕರ್ನಾಟಕದಲ್ಲಿ ಇನ್ನೂ ಎರಡು ದಿನ ಜೋರು ಮಳೆ ಮುನ್ಸೂಚನೆ
ಸಮಿತಿಯ ಸದಸ್ಯರಲ್ಲದವರು ಸಭೆಯಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಹಾಗಿದ್ದೂ, ಶೆಟ್ಟಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಸಮಿತಿಯ ಸದಸ್ಯರಲ್ಲದೇ ಇದ್ದವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲು ಅವಕಾಶವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟು ಆಯ್ಕೆಯನ್ನು ಅಸಿಂಧುಗೊಳಿಸಿದೆ.