ಕರ್ನಾಟಕ

karnataka

ETV Bharat / city

ಆರೋಗ್ಯ ಸೇತು ಆ್ಯಪ್​ ಕಡ್ಡಾಯ ಬಳಕೆ ಕುರಿತು ಸರ್ಕಾರದ ನಿಲುವು ಕೇಳಿದ ಹೈಕೋರ್ಟ್ - ಆರೋಗ್ಯ ಸೇತು ಆ್ಯಪ್

ಕಡ್ಡಾಯವಾಗಿ ಆರೋಗ್ಯ ಸೇತು ಮೊಬೈಲ್ ಆ್ಯಪ್​ ಬಳಕೆ ಮಾಡುವ ಕುರಿತು ರಾಜ್ಯ ಸರ್ಕಾರವು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

high-court-decision-about-aarogya-setu-app
ಹೈಕೋರ್ಟ್

By

Published : Aug 3, 2020, 9:07 PM IST

ಬೆಂಗಳೂರು: ಕೊರೊನಾ ಸೋಂಕಿತರನ್ನು ಪತ್ತೆಹಚ್ಚಲು ರೂಪಿಸಿರುವ ಆರೋಗ್ಯ ಸೇತು ಮೊಬೈಲ್ ಆ್ಯಪ್ಅ​ನ್ನು ಬಳಕೆ ಮಾಡುವ ಕುರಿತು ರಾಜ್ಯ ಸರ್ಕಾರವು ತನ್ನ ನಿಲುವು ತಿಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ.

ಆರೋಗ್ಯ ಸೇತು ಆ್ಯಪ್ ಬಳಕೆಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದ್ದು ನಾಗರಿಕರ ಖಾಸಗಿತನಕ್ಕೆ ಧಕ್ಕೆ ಆಗಲಿದೆ ಎಂದು ಆರೋಪಿಸಿ ನಗರದ ಅನಿವರ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಈ ವೇಳೆ ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಂ.ಬಿ ನರಗುಂದ ಅವರು ವಾದಿಸಿ, 2020 ರ ಜೂನ್ 4ರಂದು ಕೇಂದ್ರ ಗೃಹ ಸಚಿವಾಲಯ ಜಾರಿ ಮಾಡಿರುವ ಮಾರ್ಗಸೂಚಿಗಳ ಪ್ರಕಾರ ಆರೋಗ್ಯ ಸೇತು ಬಳಕೆಯನ್ನು ಕಡ್ಡಾಯಗೊಳಿಸಿಲ್ಲ, ಅದು ಜನರ ಐಚ್ಛಿಕ ವಿಷಯವಾಗಿದೆ ಎಂದು ಸ್ಪಷ್ಟಪಡಿಸಿದರು.

ಕೇಂದ್ರದ ಪರ ವಕೀಲರ ಹೇಳಿಕೆಗೆ ಆಕ್ಷೇಪಿಸಿದ ಅರ್ಜಿದಾರರ ಪರ ವಕೀಲರು, ಭಾರತೀಯ ವಿಮಾನಯಾನ ಪ್ರಾಧಿಕಾರ ಜುಲೈ 30ರಂದು ಪ್ರಕಟಣೆ ಹೊರಡಿಸಿದ್ದು, ಎಲ್ಲ ಪ್ರಯಾಣಿಕರು ಕಡ್ಡಾಯವಾಗಿ ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಬಳಸಬೇಕೆಂದು ಹೇಳಿದೆ. ಕರ್ನಾಟಕದ 5 ವಿಮಾನ ನಿಲ್ದಾಣಗಳು ಸೇರಿದಂತೆ ದೇಶದ ಹಲವು ವಿಮಾನ ನಿಲ್ದಾಣಗಳಿಗೆ ಈ ನಿರ್ದೇಶನ ನೀಡಿದೆ ಎಂದು ವಿವರಿಸಿದರು. ಅಲ್ಲದೆ, ಭಾರತೀಯ ವಿಮಾನಯಾನ ಪ್ರಾಧಿಕಾರದ ಪ್ರಕಟಣೆಯನ್ನು ಪೀಠಕ್ಕೆ ಸಲ್ಲಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಆರೋಗ್ಯ ಸೇತು ಮೊಬೈಲ್ ಅಪ್ಲಿಕೇಶನ್ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ವಿಚಾರವಾಗಿ ರಾಜ್ಯಸರ್ಕಾರದ ನಿಲುವು ಏನು ಎಂಬುದನ್ನು ಮುಂದಿನ ವಿಚಾರಣೆ ವೇಳೆ ಸ್ಪಷ್ಟಪಡಿಸುವಂತೆ ಸೂಚಿಸಿತು. ಹಾಗೆಯೇ ಆ್ಯಪ್ ಕಡ್ಡಾಯಗೊಳಿಸಿ ಭಾರತೀಯ ವಿಮಾನಯಾನ ಪ್ರಾಧಿಕಾರ ಹೊರಡಿಸಿರುವ ಪ್ರಕಟಣೆಗೆ ಸ್ಪಷ್ಟನೆ ನೀಡುವಂತೆ ಪ್ರಾಧಿಕಾರದ ಪರ ವಕೀಲರಿಗೆ ಸೂಚಿಸಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.

ABOUT THE AUTHOR

...view details