ಬೆಂಗಳೂರು :ಹೊಸ ಶಿಕ್ಷಣ ನೀತಿಯಲ್ಲಿ ಕನ್ನಡ ಕಡ್ಡಾಯ ಮಾಡಿರುವ ಆದೇಶಕ್ಕೆ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವುಗೊಳಿಸಿ ಅಂತಿಮ ತೀರ್ಪಿನಲ್ಲಿ ಕನ್ನಡ ಕಡ್ಡಾಯ ತೀರ್ಪನ್ನ ಪಡೆಯುತ್ತೇವೆ. ಹೊರಗಿನಿಂದ ಬಂದವರು ಕನ್ನಡ ಕಲಿತು, ಇಲ್ಲಿ ಸುಲಲಿತವಾಗಿ ಮಾತನಾಡಲು ಅನುಕೂಲ ಆಗಲಿದೆ. ಹಾಗಾಗಿ, ಈ ಕ್ರಮ ತೆಗೆದುಕೊಂಡಿದ್ದೇವೆ ಎಂದು ಕನ್ನಡ ಕಡ್ಡಾಯ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥ್ ನಾರಾಯಣ್ ಸಮರ್ಥಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕನ್ನಡ ಕಡ್ಡಾಯ ಮಾಡಿದೆ, ಮೊದಲು ಕಡ್ಡಾಯ ಇರಲಿಲ್ಲ. ಕೋರ್ಟ್ ಸದ್ಯಕ್ಕೆ ಸ್ಟೇ ಕೊಟ್ಟಿದೆ. ಆದರೆ, ಸ್ಕ್ವಾಶ್ ಮಾಡಿಲ್ಲ. ನ್ಯಾಯಾಲಯದಲ್ಲಿ ಪ್ರಬಲವಾಗಿ ಸರ್ಕಾರದ ಪರ ವಾದ ಮಂಡಿಸಲಿದ್ದೇವೆ. ಕನ್ನಡ ಕಡ್ಡಾಯ ಯಾಕೆ ತಂದಿದ್ದೇವೆ ಅಂತಾ ಹೈಕೋರ್ಟ್ ಗಮನಕ್ಕೆ ತಂದಿದ್ದೇವೆ. ತಡೆಯಾಜ್ಞೆ ತೆರವುಗೊಳಿಸಿ ಅಂತಿಮ ತೀರ್ಪಿನಲ್ಲಿ ಕನ್ನಡ ಕಡ್ಡಾಯ ತೀರ್ಪನ್ನ ಪಡೆಯುತ್ತೇವೆ ಎಂದರು.
ಹಲಾಲ್, ಜಟ್ಕಾ ಎರಡಕ್ಕೂ ಅವಕಾಶವಿದೆ :ಯಾರ್ಯಾರಿಗೆ ಯಾವ ಸಂಸ್ಕೃತಿ ಇದೆ ಅದನ್ನು ಪಾಲಿಸುತ್ತಾರೆ. ನಮ್ಮ ಕಾನೂನಿನಲ್ಲಿ ಸ್ಪಷ್ಟವಾಗಿ ತಿಳಿಸಿದೆ. ಹಲಾಲ್ ಪದ್ಧತಿ ಯಾರು ಮಾಡಬೇಕೋ, ತಿನ್ನಬೇಕೋ ಅದಕ್ಕೆ ಅವಕಾಶ ಇದೆ. ಯಾರು ಜಟ್ಕಾ ಕಟ್ ಮಾಡಿದ್ದಾರೆ, ಅವರು ಅವರ ಪದ್ಧತಿ ಪಾಲಿಸುತ್ತಾರೆ. ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದರು.