ಬೆಂಗಳೂರು:ಮಂಡ್ಯದ ಶ್ರೀರಂಗಪಟ್ಟಣ ಬಳಿಯ ರಂಗನತಿಟ್ಟು ಪಕ್ಷಿಧಾಮ ಸಮೀಪ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆ ಕಾಮಗಾರಿಯನ್ನು ಮುಂದುವರೆಸದಂತೆ ಹೈಕೋರ್ಟ್ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನಿರ್ದೇಶಿಸಿದೆ.
ಹೆದ್ದಾರಿ ವಿಸ್ತರಣೆ ಕಾಮಗಾರಿಯಿಂದ ರಂಗನತಿಟ್ಟು ಹಾಗೂ ಅರಬಿತಿಟ್ಟು ಪಕ್ಷಿಧಾಮದ ಸೂಕ್ಷ್ಮ ವಲಯಕ್ಕೆ ಧಕ್ಕೆ ಉಂಟುಮಾಡಲಿದೆ ಎಂದು ಆರೋಪಿಸಿ ಮೈಸೂರಿನ ನಿವೃತ್ತ ಅಧಿಕಾರಿ ಎಚ್.ಟಿ ಚಂದ್ರಶೇಖರ್ ಹಾಗೂ ಕೊಡಗಿನ ಕರ್ನಲ್ ಸಿಪಿ ಮುತ್ತಣ್ಣ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಈಗಾಗಲೇ ಕಾಮಗಾರಿ ಆರಂಭವಾಗಿದೆ ಎಂಬುದನ್ನು ಪೀಠದ ಗಮನಕ್ಕೆ ತಂದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಪೀಠ, ರಂಗನತಿಟ್ಟು ಪಕ್ಷಿದಾಮ ಹಾಗೂ ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯಗಳನ್ನು ಪರಿಸರ ಸೂಕ್ಷ್ಮವಲಯ ಎಂದು ಗುರುತಿಸಲಾಗಿದೆ. ಹೀಗಾಗಿ ಮುಂದಿನ ಆದೇಶದವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಸಬಾರದು ಎಂದು ಮಧ್ಯಂತರ ತಡೆ ನೀಡಿ ಆದೇಶಿಸಿತು. ಅಲ್ಲದೇ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಿನ ಒಂದು ತಿಂಗಳಲ್ಲಿ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಓದಿ:'ಕೈ' ನಂಬಿ ಕೆಟ್ಟೆ ಎಂದ ಹೆಚ್ಡಿಕೆ: ಸಿದ್ದರಾಯ್ಯ, ಸಿ.ಟಿ.ರವಿ ಟಾಂಗ್
ಅರ್ಜಿದಾರರ ಮನವಿ:ಮೈಸೂರು - ಕೊಡಗು ಮಾರ್ಗವಾಗಿ ಕೇರಳದ ಕಣ್ಣೂರಿಗೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 275ರ ವಿಸ್ತರಣೆ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೈಗೆತ್ತಿಕೊಂಡಿದೆ. ಇದು ರಂಗನತಿಟ್ಟು ಪಕ್ಷಿಧಾಮ ಮತ್ತು ಅರಬಿತಿಟ್ಟು ವನ್ಯಜೀವಿ ಅಭಯಾರಣ್ಯಗಳ ಸಮೀಪವೇ ಹಾದು ಹೋಗಿದ್ದು, ಚತುಷ್ಪಥ ರಸ್ತೆ ನಿರ್ಮಾಣದಿಂದ ಇಲ್ಲಿನ ಜೀವಸಂಕುಲದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಯೋಜನೆ ರೂಪಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಯಾರೊಂದಿಗೂ ಚರ್ಚೆ ನಡೆಸಿಲ್ಲ. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನೂ ಪಡೆದಿಲ್ಲ. ಆದ್ದರಿಂದ ಯೋಜನೆ ಜಾರಿಗೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೂ ತಡೆ ನೀಡಬೇಕು ಎಂದು ಕೋರಿದ್ದಾರೆ.