ಬೆಂಗಳೂರು:ನಗರದ ಹೈಕೋರ್ಟ್ ಕಟ್ಟಡದ ತಳಮಹಡಿಯಲ್ಲಿರುವ ಕಚೇರಿಗಳನ್ನು ಸ್ಥಳಾಂತರಿಸುವ ಸಂಬಂಧ ಕಬ್ಬನ್ ಪಾರ್ಕ್ನಲ್ಲಿರುವ ಚುನಾವಣಾ ಆಯೋಗದ (Election Commission) ಹಳೆಯ ಕಟ್ಟಡ ಮತ್ತು ಕರ್ನಾಟಕ ರಾಜ್ಯ ವಿಮಾ ಇಲಾಖೆಯ ಕಟ್ಟಡವನ್ನು (KGID) ತಮಗೆ ನೀಡುವ ಕುರಿತು ಪರಿಶೀಲಿಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಮನವಿ ಮಾಡಿದೆ.
ಹೈಕೋರ್ಟ್ ಕಟ್ಟಡದ ತಳ ಮಹಡಿಯಲ್ಲಿರುವ ಎಲ್ಲ ಕಚೇರಿಗಳನ್ನು ಅಲ್ಲಿಂದ ತೆರವುಗೊಳಿಸಲು ನಿರ್ದೇಶನ ಕೋರಿ ವಕೀಲ ರಮೇಶ್ ನಾಯ್ಕ್ ಸಲ್ಲಿಸಿರುವ ಪಿಐಎಲ್ ಅರ್ಜಿ ವಿಚಾರಣೆ ನಡೆಸಿದ ಸಿಜೆ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಈ ಮನವಿ ಮಾಡಿದೆ.
ವಿಚಾರಣೆ ವೇಳೆ ಹೈಕೋರ್ಟ್ ಪರ ವಾದಿಸಿದ ವಕೀಲ ಎಸ್.ಎಸ್.ನಾಗಾನಂದ್, ಹೈಕೋರ್ಟಿನ ಕೆಲ ಕಚೇರಿಗಳನ್ನು ಸ್ಥಳಾಂತರಿಸಲು ತಾಂತ್ರಿಕ ಶಿಕ್ಷಣ ಕಟ್ಟಡದ ಎರಡು ಕೊಠಡಿಗಳನ್ನು ಸರ್ಕಾರ ಈಗಾಗಲೇ ನೀಡಿದೆ. ಇಂಧನ ಭವನದಲ್ಲಿಯೂ ಜಾಗ ನೀಡುವುದಾಗಿ ತಿಳಿಸಿದೆ. ಆದರೆ, ಇಂಧನ ಭವನ ನಿರ್ಮಾಣ ಹಂತದಲ್ಲಿದ್ದು, ಅಲ್ಲಿ ಜಾಗ ನೀಡಲು ವರ್ಷಗಳೇ ಬೇಕಾಗಬಹುದು. ಹೀಗಾಗಿ, ಹೈಕೋರ್ಟ್ ಸಮೀಪದಲ್ಲಿರುವ ಚುನಾವಣಾ ಆಯೋಗದ ಹಳೆಯ ಕಟ್ಟಡ ಮತ್ತು ಕೆಜಿಐಡಿ ಕಟ್ಟಡವನ್ನು ಹೈಕೋರ್ಟ್‌ಗೆ ಹಸ್ತಾಂತರಿಸಿದರೆ ತಕ್ಷಣವೇ ಸಮಸ್ಯೆ ಬಗೆಹರಿಯಲಿದೆ ಎಂದರು.