ಬೆಂಗಳೂರು:ರಾಜ್ಯದ ಎಲ್ಲಾ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಒದಗಿಸುವ ಸಂಬಂಧ ಮೂರು ವಾರಗಳಲ್ಲಿ ಯೋಜನೆ ರೂಪಿಸಿ ಸಲ್ಲಿಸುವಂತೆ ಹೈಕೋರ್ಟ್ ಶಿಕ್ಷಣ ತಜ್ಞರಿಗೆ ನಿರ್ದೇಶಿಸಿದೆ.
ರಾಜ್ಯದ ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವಂತೆ ಕೋರಿ ಆ್ಯಂಟಿ ಕರಪ್ಷನ್ ಕೌನ್ಸಿಲ್ ಆಫ್ ಇಂಡಿಯಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾ. ಬಿ.ವಿ ನಾಗರತ್ನ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲ ಕಾಲ ವಾದ ಆಲಿಸಿದ ಪೀಠ, ಸಂವಿಧಾನದ ವಿಧಿ 21(A) ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ-2009ರ ಆಶಯಗಳನ್ನು ಸಾಧಿಸಬೇಕಾದರೆ ಶಾಲೆಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವ ಸಮಗ್ರ ನೀಲನಕ್ಷೆ ಬೇಕು. ಈ ನಿಟ್ಟಿನಲ್ಲಿ ಶಿಕ್ಷಣ ತಜ್ಞ ಡಾ. ವಿ.ಪಿ ನಿರಂಜನಾರಾಧ್ಯ, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದ ಮುಖ್ಯಸ್ಥೆ ಡಾ. ನೀತುಶರ್ಮಾ ಹಾಗೂ ಅರ್ಜಿದಾರರ ಪರ ವಕೀಲೆ ಬಿ. ಸುಧಾ ಸೇರಿ ಸಭೆ ನಡೆಸಿ ಕರಡು ಯೋಜನೆಯೊಂದನ್ನು ತಯಾರಿಸಿ ಮೂರು ವಾರಗಳಲ್ಲಿ ಸಲ್ಲಿಸುವಂತೆ ನಿರ್ದೇಶಿಸಿತು.
ಶಿಕ್ಷಣ ಇಲಾಖೆ ಶಾಲೆಗಳಿಗೆ ಮೂಲಸೌಕರ್ಯ ಒದಗಿಸಲು ತನ್ನದೇ ಯೋಜನೆ ರೂಪಿಸಿದೆ. ಅದಕ್ಕಾಗಿ 2021-22ನೇ ಸಾಲಿನಲ್ಲಿ 100 ಕೋಟಿ ರೂ. ಮೀಸಲಿಟ್ಟಿದೆ. ಆದರೆ ಅನುಷ್ಠಾನ ಹೇಗೆಂಬುದರ ಸ್ಪಷ್ಟತೆ ಇಲ್ಲ. ಆದ್ದರಿಂದ ಶಿಕ್ಷಣ ತಜ್ಞರು ತಯಾರಿಸುವ ಕರಡು ಯೋಜನೆ ಬಗ್ಗೆ ಅಭಿಪ್ರಾಯ ಮತ್ತು ಟಿಪ್ಪಣಿ ನೀಡಲು ಶಿಕ್ಷಣ ಇಲಾಖೆಗೂ ಅವಕಾಶ ನೀಡಲಾಗುವುದು. ಕರಡು ಯೋಜನೆ ಮತ್ತು ಶಿಕ್ಷಣ ಇಲಾಖೆಯ ಅಭಿಪ್ರಾಯಗಳನ್ನು ಪರಿಗಣಿಸಿ ನ್ಯಾಯಾಲಯ ಅಗತ್ಯ ನಿರ್ದೇಶನಗಳನ್ನು ನೀಡಲಿದೆ ಎಂದು ತಿಳಿಸಿದ ಪೀಠ ವಿಚಾರಣೆಯನ್ನು ಆ.19ಕ್ಕೆ ಮುಂದೂಡಿತು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣ :
ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಿಗೆ ಮೂಲಸೌಕರ್ಯ ಕಲ್ಪಿಸುವ ಕುರಿತು ಸಲ್ಲಿಸಿರುವ ಅರ್ಜಿಯಲ್ಲಿ ಸೂಕ್ತ ಸಲಹೆ ನೀಡುವಂತೆ ಶಿಕ್ಷಣ ತಜ್ಞ ಡಾ. ವಿ.ಪಿ ನಿರಂಜನಾರಾಧ್ಯ ಅವರಿಗೆ ಪೀಠ ಜು.17ರಂದು ಕೋರಿತ್ತು. ಅದರಂತೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ನಿರಂಜನಾರಾಧ್ಯ, ಮೂಲಭೂತ ಸೌಕರ್ಯಗಳ ಕೊರತೆಯಿಂದಾಗಿಯೇ ಸರ್ಕಾರಿ ಶಾಲೆಗಳಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 4,216 ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ಮಕ್ಕಳಿದ್ದರೆ, 10,341 ಶಾಲೆಗಳಲ್ಲಿ 25ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ಅಂತೆಯೇ 23,629 ಶಾಲೆಗಳಲ್ಲಿ 50ಕ್ಕಿಂತ ಕಡಿಮೆ ಮಕ್ಕಳಿದ್ದರೆ, 31 ಸಾವಿರಕ್ಕೂ ಅಧಿಕ ಶಾಲೆಗಲ್ಲಿ ನೂರಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ.
ಈ ಶಾಲೆಗಳಲ್ಲಿ ಮೂಲಸೌಕರ್ಯಗಳು ಇಲ್ಲದಿರುವುದೇ ಮಕ್ಕಳ ಸಂಖ್ಯೆ ಕಡಿಮೆಯಾಗಲು ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳು ಮುಚ್ಚಿ ಹೋಗುವ ಅಪಾಯವಿದೆ. ಆರ್ಟಿಇ ಜಾರಿಗೆ ಬಂದು 11 ವರ್ಷ ಕಳೆದರೂ ನಿರೀಕ್ಷಿತ ಗುರಿ ಸಾಧಿಸಿಲ್ಲ. ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಂಬಂಧಿಸಿದಂತೆ 2017ರಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ 21 ಶಿಫಾರಸುಗಳನ್ನು ಒಳಗೊಂಡ ವರದಿ ಸಲ್ಲಿಸಿತ್ತು. ಆ ವರದಿ ಈವರೆಗೆ ವಿಧಾನಮಂಡಲದ ಉಭಯ ಸದನಗಳಲ್ಲಿ ಚರ್ಚೆಗೆ ಬಂದಿಲ್ಲ. ಹಾಗಾಗಿ, ಶಾಲೆಗಳಿಗೆ ಮೂಲಸೌಕರ್ಯ ಒದಗಿಸುವ ಸಂಬಂಧ ಸಮಗ್ರ ನೀಲನಕ್ಷೆ ಬೇಕಾಗಿದೆ ಎಂದು ವಿವರಿಸಿದರು.