ಬೆಂಗಳೂರು:ಹೈಕೋರ್ಟ್ ನ್ಯಾಯಮೂರ್ತಿಗಳು ಮತ್ತು ಕೆಲ ವಕೀಲರನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ಗೆ ಪತ್ರ ಬರೆದಿದ್ದ, 78 ವರ್ಷದ ವೃದ್ಧನ ವಿರುದ್ಧ ದಾಖಲಿಸಿಕೊಂಡಿದ್ದ ಪ್ರಕರಣವನ್ನು ಹೈಕೋರ್ಟ್ ಕೈ ಬಿಟ್ಟಿದೆ.
ತಮ್ಮ ವೈಯಕ್ತಿಕ ಕೇಸ್ವೊಂದರಲ್ಲಿ ಹಿನ್ನೆಡೆ ಅನುಭವಿಸಿದ್ದ ಜಯನಗರ ನಿವಾಸಿ ಎಸ್.ವಿ ಶ್ರೀನಿವಾಸ್ ರಾವ್ ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಕೊಲ್ಲುವುದಾಗಿ ಹೈಕೋರ್ಟ್ಗೆ ಪತ್ರ ಬರೆದಿದ್ದರು.
ಈ ಹಿನ್ನೆಲೆಯಲ್ಲಿ ಹೈಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿತ್ತು. ಈ ಅರ್ಜಿಯನ್ನು ಇಂದು ಸಿಜೆ ರಿತುರಾಜ್ ಅವಸ್ಥಿ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ನನಗೆ ನ್ಯಾಯ ಸಿಗದಿದ್ದಕ್ಕೆ ಹೀಗೆ ಪತ್ರ ಬರೆದಿದ್ದೆ.. ’ಈಗ ತಪ್ಪಿನ ಅರಿವಾಗಿದೆ’
ವಿಚಾರಣೆ ವೇಳೆ ಖುದ್ದು ವಾದ ಮಂಡಿಸಿದ ಆರೋಪಿತ ವೃದ್ಧ ರಾವ್, ತಮ್ಮ ಆಸ್ತಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಳೆದ 13 ವರ್ಷಗಳಿಂದ ನನಗೆ ನ್ಯಾಯ ಸಿಕ್ಕಿಲ್ಲ. ಇದರಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡು ಹಾಗೆ ಪತ್ರ ಬರೆದಿದ್ದೆ. ಈ ಬಳಿಕ ತಪ್ಪಿನ ಅರಿವಾಗಿ ಹಿಂದಿನ ಸಿಜೆ ಸೂಚನೆ ಮೇರೆಗೆ ಕ್ಷಮೆ ಕೂಡ ಕೇಳಿದ್ದೇನೆ. ನ್ಯಾಯಾಲಯ ನನ್ನ ವಿರುದ್ಧದ ಪ್ರಕರಣ ಕೈಬಿಡುವುದಾಗಿ ತಿಳಿಸಿತ್ತು. ನನಗೆ ಅನ್ಯಾಯವಾಗಿದ್ದು, ನ್ಯಾಯ ಕೊಡಿಸಿ ಎಂದರು.