ಬೆಂಗಳೂರು: ವರ್ಗಾವಣೆ ಆದ್ರೆ ಇಲಾಖೆಯ ವಾಹನ ಕೊಂಡೊಯ್ಯುವಂತಿಲ್ಲ ಎಂದು ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಆದೇಶ ಹೊರಡಿಸಿದ್ದರು. ಇದಕ್ಕೆ ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಮುಸುಕಿನ ಗುದ್ದಾಟ, ಒಳಜಗಳವೇ ಈ ಆದೇಶಕ್ಕೆ ಪ್ರಮುಖ ಕಾರಣ ಎಂಬುದು ತಿಳಿದು ಬಂದಿದೆ.
ಅಧಿಕಾರಿಗಳ ವಿಚಾರದಲ್ಲಿ ಐಜಿಪಿ ಗರಂ ಆಗಿದ್ಯಾಕೆ? - Praveen Sood latest news
ರಾಜ್ಯ ಪೊಲೀಸ್ ಇಲಾಖೆಯಲ್ಲಿನ ಮುಸುಕಿನ ಗುದ್ದಾಟದಿಂದಾಗಿ ಡಿಜಿ, ಐಜಿಪಿ ಪ್ರವೀಣ್ ಸೂದ್ ವರ್ಗಾವಣೆ ಆಗುವ ಅಧಿಕಾರಿಗಳು ಇನ್ನು ಮುಂದೆ ತಮ್ಮ ಜೊತೆಗೆ ಸರ್ಕಾರಿ ವಾಹನ ಕೊಂಡೊಯ್ಯುವಂತಿಲ್ಲ ಎಂದು ಆದೇಶ ನೀಡಿದ್ದಾರೆ.
ಡಿಜಿಪಿ ಹುದ್ದೆಯಲ್ಲಿರುವವರಿಗೆ ಮೂರು ವಾಹನ, ಡಿಸಿಪಿ ಹುದ್ದೆಯಲ್ಲಿರುವವರಿಗೆ ಎರಡು ವಾಹನಗಳನ್ನು ನೀಡಲಾಗುತ್ತದೆ. ಆದರೆ, ಕೆಲ ಅಧಿಕಾರಿಗಳು ವರ್ಗಾವಣೆ ಆದ ಮೇಲೂ ವೈಯಕ್ತಿಕ ಕಾರಣಗಳಿಗೆ ವಾಹನಗಳನ್ನ ಬಳಸಿಕೊಳ್ಳುತ್ತಿದ್ದಾರೆ. ವರ್ಗಾವಣೆ ಆಗ್ತಿದ್ದಂತೆ ವಾಹನವನ್ನೂ ತೆಗೆದುಕೊಂಡು ಹೋಗ್ತಿದ್ದಾರೆ. ಹೀಗಾಗಿ ಹೊಸದಾಗಿ ವರ್ಗಾವಣೆ ಆಗಿ ಬಂದ ಅಧಿಕಾರಿಗಳಿಗೆ ವಾಹನ ಸಿಗುತ್ತಿಲ್ಲ. 'ಕಾಲ್ ಆನ್ ಡ್ಯೂಟಿ' ಪ್ರೊಸಿಜರ್ ಮುಗಿಸೋಕು ವಾಹನ ಇಲ್ಲ. (ಕಾಲ್ ಆನ್ ಡ್ಯೂಟಿ ಅಂದರೆ, ವರ್ಗಾವಣೆ ಆದ ಅಧಿಕಾರಿಗಳು ಕೂಡಲೇ ಸಂಬಂಧಪಟ್ಟ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಕರ್ತವ್ಯಕ್ಕೆ ಹಾಜರಾಗಬೇಕು).
ಈ ವಿಚಾರವನ್ನ ಡಿಜಿ, ಐಜಿಪಿ ಪ್ರವೀಣ್ ಸೂದ್ ಅವರ ಗಮನಕ್ಕೆ ಕೆಲ ಹಿರಿಯ ಅಧಿಕಾರಿಗಳು ತಂದಿದ್ದಾರೆ. ಹೀಗಾಗಿ ಗರಂ ಆದ ಪ್ರವೀಣ್ ಸೂದ್ ಇಂದು ಒಂದು ಇಲಾಖೆಯಿಂದ ಮತ್ತೊಂದು ಇಲಾಖೆಗೆ ವರ್ಗಾವಣೆ ಆಗುವ ಅಧಿಕಾರಿಗಳು, ಇನ್ಮುಂದೆ ತಮ್ಮ ಜೊತೆಗೆ ಸರ್ಕಾರಿ ವಾಹನ ಕೊಂಡೊಯ್ಯುವಂತಿಲ್ಲ ಎಂದು ಸುತ್ತೋಲೆ ಹೊರಡಿಸುವ ಮೂಲಕ ಎಚ್ಚರಿಕೆ ನೀಡಿದ್ದಾರೆ ಎಂದು ಇಲಾಖೆಯ ಉನ್ನತ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.