ಕರ್ನಾಟಕ

karnataka

ETV Bharat / city

ರಾಜ್ಯದ 2,859 ಆರೋಗ್ಯ ಉಪ ಕೇಂದ್ರಗಳು ಮೇಲ್ದರ್ಜೆಗೆ..ಗುತ್ತಿಗೆ ಆಧಾರದಲ್ಲಿ ನರ್ಸ್​ಗಳ ನೇಮಕಕ್ಕೆ ಸಂಪುಟ ಅನುಮೋದನೆ.. - ಸಿಎಂ ಬಸವರಾಜ್ ಬೊಮ್ಮಾಯಿ

ಸಚಿವ ಸಂಪುಟ ಸಭೆಗೆ ಸಚಿವರಾದ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಗೈರಾಗಿದ್ದಾರೆ. ಖಾತೆ ಅತೃಪ್ತಿ ಹೊಂದಿರುವ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕಾರ‌ ಮಾಡಿಲ್ಲ. ಇತ್ತ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿವ ಶ್ರೀರಾಮುಲು ಅವರಿಗೂ ಅಸಮಾಧಾನ ಇತ್ತು. ಇದೀಗ ಸಚಿವ ಸಂಪುಟ ಸಭೆಗೆ ಗೈರಾಗಿರುವುದು ಅಚ್ಚರಿ ಮೂಡಿಸಿದೆ

State Cabinet Meeting
State Cabinet Meeting

By

Published : Aug 19, 2021, 1:46 PM IST

Updated : Aug 19, 2021, 3:40 PM IST

ಬೆಂಗಳೂರು:ಸೆಪ್ಟೆಂಬರ್ 13ರಿಂದ ಸೆ.24ರವರೆಗೆ ಮಳೆಗಾಲದ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಬೆಂಗಳೂರಲ್ಲಿ ಹತ್ತು ದಿನಗಳ ಕಾಲ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ.

ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಬೆಂಗಳೂರಲ್ಲಿ ಸೆ.13ರಿಂದ ಸೆ.24ರ ವರೆಗೆ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಸುಮಾರು 14 ವಿವಿಧ ಕ್ಯಾಬಿನೆಟ್ ಉಪಸಮಿತಿ ಪುನಾರಚನೆ‌ ಮಾಡಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಸಚಿವ ಸಂಪುಟ ಸಭೆಯ ಮುಖ್ಯಾಂಶಗಳು:

  • ಸೆ.13ರಿಂದ 10 ದಿನಗಳ ಕಾಲ ಮಳೆಗಾಲದ ಅಧಿವೇಶನ ನಡೆಸಲು ಸಚಿವ ಸಂಪುಟ ತೀರ್ಮಾನ
  • ಸುಮಾರು 16 ವಿವಿಧ ಕ್ಯಾಬಿನೆಟ್ ಉಪಸಮಿತಿ ಪುನರಚನೆ‌ ಮಾಡಲು ನಿರ್ಧಾರ
  • ಕರ್ನಾಟಕ ರಾಜ್ಯ ಮಾನಸಿಕ ಆರೋಗ್ಯ ಆರೈಕೆ ನಿಯಮಗಳು-2021ಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ
  • 2021-22ನೇ ಸಾಲಿಗೆ ಸರ್ಕಾರಿ ಹಾಗೂ ಅನುದಾನಿತ ಶಾಲಾ ಕಾಲೇಜುಗಳ ಹದಿಹರೆಯದ ಹೆಣ್ಣು ಮಕ್ಕಳಿಗೆ 'ಶುಚಿ' ಕಾರ್ಯಕ್ರಮದಡಿ ಸ್ಯಾನಿಟರಿ ನ್ಯಾಪ್ ಕಿನ್ ಪ್ಯಾಡ್​​ಗಳನ್ನು 47 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಖರೀದಿಸಿ ವಿತರಿಸಲು ಆಡಳಿತಾತ್ಮಕ ಅನುಮೋದನೆ
  • ರಾಜ್ಯದಲ್ಲಿನ 2,859 ಆರೋಗ್ಯ ಉಪ ಕೇಂದ್ರಗಳನ್ನು 'ಆರೋಗ್ಯ ಮತ್ತು ಕ್ಷೇಮ ಕೇಂದ್ರ'ಗಳನ್ನಾಗಿ 478.91 ಕೋಟಿ ರೂ.ಗಳ ಅಂದಾಜು ಮೊತ್ತದಲ್ಲಿ ಮೇಲ್ದರ್ಜೆಗೇರಿಸಲು ಆಡಳಿತಾತ್ಮಕ ಅನುಮೋದನೆ. ಇದರಲ್ಲಿ ಆರೋಗ್ಯ ಪೂರೈಕೆದಾರರ (ನರ್ಸ್​) ಹುದ್ದೆಗಳನ್ನು ತಾತ್ಕಾಲಿಕವಾಗಿ ಸೃಜಿಸಲಾಗುತ್ತದೆ. ಉಪಕೇಂದ್ರಕ್ಕೆ ಕೊಠಡಿಯಿಲ್ಲವಾದರೆ ಐದು ಸಾವಿರ ರೂ.‌ ಮೊತ್ತದ ಕಟ್ಟಡ ಬಾಡಿಗೆ ಆಧಾರದಲ್ಲಿ ತೆಗೆದುಕೊಳ್ಳಲು ಅನುಮತಿ
  • ಕಾನೂನು ಅಧಿಕಾರಿ (ಕಿರಿಯ) ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆಯ ಕಾನೂನು ಅಧಿಕಾರಿ ಎಂ.ಎಲ್.ಶೈಲಜಾ ಅವರು ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿ ಸೇವೆಯಿಂದ ವಜಾಗೊಳಿಸುವ ಮತ್ತು ದಂಡನೆ ವಿಧಿಸಲು ಅನುಮೋದನೆ
  • ನಿವೃತ್ತ ಮೀಸಲು ಪೊಲೀಸ್ ಸಹಾಯಕ ಉಪ ನಿರೀಕ್ಷಕ ಕೆ.ಸುಕುಮಾರ್ ಅವರನ್ನು ರಾಜ್ಯ ಗುಪ್ತವಾರ್ತೆ ಘಟಕದಲ್ಲಿ ಗುತ್ತಿಗೆ ಆಧಾರದಲ್ಲಿ ನೇಮಿಸಲು ಅನುಮತಿ
  • ಕಲಬುರಗಿ ಜಿಲ್ಲೆ ಆಳಂದ ತಾಲೂಕು ಮಿನಿ ವಿಧಾನ ಸೌಧ ಕಟ್ಟಡ ಕಾಮಗಾರಿಯ 12.48 ಕೋಟಿ ರೂ. ಪರಿಷ್ಕೃತ ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ
  • ಬೆಂಗಳೂರಿನ ಮಾತಾ ಅಮೃತಾನಂದಮಯಿ ಮಠ ಅವರಿಗೆ ಮಂಜೂರು ಮಾಡಿರುವ ಬೆಂಗಳೂರು ನಗರ ಜಿಲ್ಲೆ ಬೆಂಗಳೂರು ಪೂರ್ವ ತಾಲೂಕು ವರ್ತೂರು ಹೋಬಳಿ, ಕಸವನಹಳ್ಳಿ ಗ್ರಾಮದ ಸರ್ವೆ ನಂಬರ್ 26 ಮತ್ತು 27ರಲ್ಲಿ ಒಟ್ಟು 22-23 ಎಕರೆ ಜಮೀನಿನ ಉಪಯೋಗದ ಉದ್ದೇಶಗಳನ್ನು ಮಾರ್ಪಡಿಸಿರುವ ಸರ್ಕಾರಿ ಆದೇಶವನ್ನು ಮರು ಪರಿಶೀಲಿಸಲು ತೀರ್ಮಾನ
  • ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪಚ್ಚನಾಡಿ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಸಂಗ್ರಹವಾಗಿರುವ 9 ಲಕ್ಷ ಟನ್ ಪಾರಂಪರಿಕ ತ್ಯಾಜ್ಯ ನಿರ್ವಹಣೆಗಾಗಿ ಸಲ್ಲಿಸಿರುವ 73.73 ಕೋಟಿ ರೂ.ಗಳ ವಿಸ್ತೃತ ಯೋಜನಾ ವರದಿಗೆ ಅನುಮೋದನೆ. ಹೈಕೋರ್ಟ್ ನಿರ್ದೇಶನದ ಮೇರೆಗೆ ಈ ತೀರ್ಮಾನ
  • ಸಿಎಂ ಸ್ವಾತಂತ್ರ್ಯ ದಿನಾಚರಣೆಯಂದು ಘೋಷಿಸಿದ್ದ ಆಜಾದಿ ಅಮೃತ ಮಹೋತ್ಸವ ಅಂಗವಾಗಿ 400 ಕೋಟಿ ಮೊತ್ತದ ವಿವಿಧ ಅಮೃತ ಕಾರ್ಯಕ್ರಮಗಳಿಗೆ ಅನುನೋದನೆ

ಸಂಪುಟ ಸಭೆಗೆ ಆನಂದ್ ಸಿಂಗ್, ಶ್ರೀರಾಮುಲು ಗೈರು:

ಸಚಿವ ಸಂಪುಟ ಸಭೆಗೆ ಸಚಿವರಾದ ಆನಂದ್ ಸಿಂಗ್ ಹಾಗೂ ಶ್ರೀರಾಮುಲು ಗೈರಾಗಿದ್ದಾರೆ. ಖಾತೆ ಅತೃಪ್ತಿ ಹೊಂದಿರುವ ಆನಂದ್ ಸಿಂಗ್ ಇನ್ನೂ ಅಧಿಕಾರ ಸ್ವೀಕಾರ‌ ಮಾಡಿಲ್ಲ. ಇತ್ತ ಡಿಸಿಎಂ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಸಚಿವ ಶ್ರೀರಾಮುಲು ಅವರಿಗೂ ಅಸಮಾಧಾನ ಇತ್ತು. ಇದೀಗ ಸಚಿವ ಸಂಪುಟ ಸಭೆಗೆ ಗೈರಾಗಿರುವುದು ಅಚ್ಚರಿ ಮೂಡಿಸಿದೆ.

Last Updated : Aug 19, 2021, 3:40 PM IST

ABOUT THE AUTHOR

...view details