ಬೆಂಗಳೂರು :ಯುದ್ಧ ಪೀಡಿತ ಉಕ್ರೇನ್ನಿಂದ ವಾಪಸ್ ಆದ 20 ಸಾವಿರಕ್ಕೂ ಹೆಚ್ಚು ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ಅವರ ನೆರವಿಗೆ ರಾಜ್ಯ-ಕೇಂದ್ರ ಸರ್ಕಾರಗಳು ಧಾವಿಸಬೇಕು ಎಂದು ನಾನು ಒತ್ತಾಯಿಸುತ್ತಲೇ ಇದ್ದೆ. ಆದರೆ, ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಈ ವಿದ್ಯಾರ್ಥಿಗಳ ನೆರವಿಗೆ ನಾವಿದ್ದೇವೆ, ಹೆದರಬೇಕಿಲ್ಲ ಎಂದು ಹೇಳುತ್ತಿದ್ದ ಎರಡೂ ಸರ್ಕಾರಗಳು, ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ. ಒಂದೆಡೆ ನೀಟ್ ವ್ಯವಸ್ಥೆಯನ್ನು ಇಡೀ ದೇಶದ ಮೇಲೆ ಹೇರಿ, ವೈದ್ಯಕೀಯ ಶಿಕ್ಷಣವನ್ನು ಶ್ರೀಮಂತರಿಗೆ ಸಮರ್ಪಣೆ ಮಾಡಿದ ಪಾಪದ ಫಲವಷ್ಟೇ ಇದು ಎಂದಿದ್ದಾರೆ.
ಉಕ್ರೇನ್ ದೇಶದಿಂದ ವಾಪಸ್ ಬಂದ ರಾಜ್ಯದ 700ಕ್ಕೂ ಹೆಚ್ಚು ವೈದ್ಯ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಅವರು ಕೊಟ್ಟ ಭರವಸೆ ಏನಾಯಿತು?. ರಾಜ್ಯ ಸರ್ಕಾರ ಕೇಂದ್ರದ ಕಡೆ ಮುಖ ಮಾಡಿ ಕೂತಿದೆ. ಇದು ಸರಿಯಲ್ಲ. ಕೇಂದ್ರದ ಮೇಲೆ ಒತ್ತಡ ಹೇರಬೇಕಿದೆ ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡಲೇ ಮಧ್ಯಪ್ರವೇಶ ಮಾಡಿ ವಿದ್ಯಾರ್ಥಿಗಳ ಹಿತರಕ್ಷಣೆ ಮಾಡಲೇಬೇಕು ಎಂದು ಹೆಚ್ಡಿಕೆ ಒತ್ತಾಯಿಸಿದ್ದಾರೆ. ಭಾರತದಲ್ಲಿ ವ್ಯಾಸಂಗ ಮಾಡಲಾಗದೇ, ಅತ್ತ ಉಕ್ರೇನ್ಗೂ ಮರಳಿ ಹೋಗಲಾರದೆ ಈ ವಿದ್ಯಾರ್ಥಿಗಳೆಲ್ಲರೂ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ಹೇಳಿದ್ದಾರೆ.