ಬೆಂಗಳೂರು: ಮಹಾನಗರ ಬೆಂಗಳೂರಲ್ಲಿ ತಡರಾತ್ರಿ ಸುರಿದ ಧಾರಾಕಾರ ಮಳೆ ಅವಾಂತರ ಸೃಷ್ಟಿಸಿದ್ದು, ಇಬ್ಬರು ಬಲಿಯಾಗಿದ್ದಾರೆ. 24 ವರ್ಷದ ಮಿಥುನ್ ಸಾಗರ ರಾಜಕಾಲುವೆಯಲ್ಲಿ ಕೊಚ್ಚಿ ಹೋಗಿದ್ದರೆ, ದೇವಸಂದ್ರ ವಾರ್ಡ್ನಲ್ಲಿ ವಾಸವಾಗಿದ್ದ ಕಾವೇರಿನಗರದ ಮುನಿಯಮ್ಮ (60) ಗೋಡೆ ಕುಸಿದು ಸಾವನ್ನಪ್ಪಿದ್ದಾರೆ. ಇನ್ನು ಹಲವೆಡೆ ಮನೆಗಳಿಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ.
ಭಾರಿ ಮಳೆ ಸುರಿದ ಕಾರಣ ರಾತ್ರಿ 12ರ ಸುಮಾರಿಗೆ ಕೆ ಆರ್ ಪುರದ ಗಾಯತ್ರಿ ಬಡಾವಣೆ ನೀರಿನಿಂದ ಆವರಿಸಿಕೊಂಡಿತ್ತು. ಈ ವೇಳೆ ಯುವಕ ವಾಸವಿದ್ದ ಕಟ್ಟಡದ ಬಳಿ ಕಾಂಪೌಂಡ್ ಬಿದ್ದು, ಆತನ ಬೈಕ್ ನೀರಲ್ಲಿ ಕೊಚ್ಚಿ ಹೋಗುತ್ತಿತ್ತು.
ಆಗ ಬೈಕ್ ರಕ್ಷಿಸಲು ಮುಂದಾದ ಯುವಕ ಕೂಡ ನೀರಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಮಿಥುನ್ ಸಾಗರ್ ಸಿವಿಲ್ ಇಂಜಿನಿಯರ್ ಆಗಿ ಖಾಸಗಿ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು.
ಸದ್ಯ ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಜಂಟಿ ಕಾರ್ಯಚರಣೆ ನಡೆಸಿವೆ. ರಾಜಕಾಲುವೆಯ ಅಂಡರ್ ಪಾಸ್ ಓಪನ್ ಮಾಡಿ ರಬ್ಬರ್ ಬೋಟ್ ಮೂಲಕ ಶೋಧ ಕಾರ್ಯ ನಡೆದಿದೆ. ಮಳೆ ನೀರು ವೇಗವಾಗಿ ಹರಿಯುತ್ತಿರುವ ಹಿನ್ನೆಲೆ ಕಾರ್ಯಾಚರಣೆ ಅಡ್ಡಿಯಾಗಿದೆ.