ಬೆಂಗಳೂರು: ರಾಜಧಾನಿಯಲ್ಲಿ ಬೆಳ್ಳಂ ಬೆಳ್ಳಗ್ಗೆಯೇ ಶುರುವಾದ ವರ್ಷಧಾರೆ ಸಾಕಷ್ಟು ಅವಾಂತರ ಸೃಷ್ಟಿಸಿತು. ಮುಖ್ಯವಾಗಿ 10 ರಿಂದ 11 ಗಂಟೆ ಸಮಯದಲ್ಲಿ ಸುರಿದ ಮಳೆಯಿಂದಾಗಿ ಕಛೇರಿಗಳಿಗೆ ಹೋಗುವ ಜನರು ಪರದಾಡುವಂತಾಗಿತ್ತು.
ನಗರದ ಪ್ರಮುಖ ಸ್ಥಳಗಳಾದ ಮೆಜೆಸ್ಟಿಕ್, ಶಿವಾನಂದ ಸರ್ಕಲ್, ಕರ್ಪೊರೇಷನ್, ಕೆ.ಆರ್ ಮಾರುಕಟ್ಟೆಯಲ್ಲಿ ಮಳೆ ಸುರಿದು ಜನ ಜೀವನ ಅಸ್ಥವ್ಯಸ್ಥಗೊಂಡಿತು.
ರಾಜ್ಯ/ನಗರದ ಹವಾಮಾನದ ಸ್ಥಿತಿಗತಿ:ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಿನ್ನೆಲೆ ಜುಲೈ 16ರ ವರೆಗೆ ರಾಜ್ಯದಲ್ಲಿ ಭಾರಿ ಮಳೆ ಸಾಧ್ಯತೆ ಇದೆ. ಹವಾಮಾನ ಇಲಾಖೆಯಿಂದ ಈಗಾಗಲೇ 7 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಿಗೆ ಆರೆಂಜ್ ಆಲರ್ಟ್ ಘೋಷಿಸಲಾಗಿದೆ.
ಉತ್ತರ ಕರ್ನಾಟಕದ ಜಿಲ್ಲೆಗಳಾದ ಬೀದರ್, ಕಲಬುರಗಿ, ಬೆಳಗಾವಿ, ಧಾರವಾಡ, ರಾಯಚೂರು, ಯಾದಗಿರಿ, ಹಾವೇರಿ, ಗದಗ, ಬಾಗಲಕೋಟೆಯ ಕೆಲವು ಕಡೆ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಈ ಜಿಲ್ಲೆಗಳಿಗೆ ಇಂದು ಆರೆಂಜ್ ಹಾಗೂ ಜು.14 ಮತ್ತು 15 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರು ನಗರದಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದ್ದು, ಗರಿಷ್ಠ ಉಷ್ಣಾಂಶ 28 ಹಾಗೂ ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆಯಿಂದ ಮಾಹಿತಿ ನೀಡಿದೆ.
ಬೆಳಗಾವಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ನಿರಂತರವಾಗಿ ಜಿಟಿಜಿಟಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ವರ್ಷಧಾರೆ ಮುಂದುವರೆದಿದೆ. ಜುಲೈ 15ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಘೋಷಣೆಯಾಗಿದೆ. ಪ್ರವಾಹದ ತುರ್ತು ಪರಿಸ್ಥಿತಿ ಎದುರಿಸಲು ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಸೂಚನೆ ನೀಡಿದ್ದಾರೆ. ಅಲ್ಲದೆ ಜು. 15ರವರೆಗೆ ನದಿ ತೀರಕ್ಕೆ ತೆರಳದಂತೆ ಜಾಗೃತಿ ಮೂಡಿಸಲಾಗುತ್ತಿದೆ.